ವಾಷಿಂಗ್ಟನ್ ಡಿಸಿ : ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಅತ್ಯಂತ ಅಪಾಯಕಾರಿ ಸಂಗತಿ ನಡೆಯುತ್ತಿದೆ, ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಅರಿಜೋನಾ ರಾಜ್ಯದಲ್ಲಿ ಗುರುವಾರ ಭಾಷಣ ಮಾಡಿದ ಜೋ ಬೈಡನ್, ದೇಶದಲ್ಲಿ ಈಗ ಅತ್ಯಂತ ಅಪಾಯಕಾರಿಯಾದದ್ದು ನಡೆಯುತ್ತಿದೆ. ಮುಂಬರುವ ಚುನಾವಣೆ ಹಿನ್ನೆಲೆ ಆಮೂಲಾಗ್ರ ಪ್ರಚಾರ ಮಾಡಲಾಗುತ್ತಿದೆ. ಆದ್ರೆ, ಇದು ಪ್ರಜಾಪ್ರಭುತ್ವದ ಆಧಾರಕ್ಕೆ ಅನುಗುಣವಾಗಿಲ್ಲ. ಅಸ್ತ್ರಗಳ ಬಲದಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ. ಜನರೇ ಇಂತಹ ವ್ಯಕ್ತಿಗಳ ಪರವಾಗಿ ನಿಲ್ಲದಿದ್ದಾಗ ಅವುಗಳನ್ನು ನಾಶಪಡಿಸಬಹುದು ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಅಪಾಯಕಾರಿ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷವಾದ ರಿಪಬ್ಲಿಕನ್ನರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಬೈಡನ್, "ಇಂದಿನ ರಿಪಬ್ಲಿಕನ್ ಪಕ್ಷವು MAGA ರಿಪಬ್ಲಿಕನ್ ಉಗ್ರಗಾಮಿಗಳಿಂದ ನಡೆಸಲ್ಪಡುತ್ತಿದೆ. ಅಮೆರಿಕದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬದಲಾಯಿಸುವುದು ಈ ಮೂಲಭೂತವಾದಿಗಳ ಕಾರ್ಯಸೂಚಿಯಾಗಿದೆ. MAGA ಆಂದೋಲನವು ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಘೋಷಣೆಯ ಕಿರು ರೂಪವಾಗಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ 'ಮೇಕ್ ಅಮೆರಿಕ, ಗ್ರೇಟ್ ಎಗೇನ್' ಎಂಬ ಸ್ಲೋಗನ್ ನೀಡಿದ್ದು, ಇದೀಗ ಮತ್ತೆ ಜನಪ್ರಿಯವಾಗುತ್ತಿದೆ ಎಂದರು.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಯಕ್ತಿಕವಾಗಿ ಶಕ್ತಿ ಶಾಲಿಯಾಗಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯಿಲ್ಲ. ಮೇಕ್ ಅಮೆರಿಕ, ಗ್ರೇಟ್ ಎಗೇನ್ ಅಭಿಯಾನವು ದೇಶದ ರಾಜಕೀಯ ವ್ಯವಸ್ಥೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಮುಗೀತು ಅಮೆರಿಕದಲ್ಲಿ ಟ್ರಂಪ್ ಕಾರುಬಾರು ; ಶ್ವೇತಭವನದಿಂದ ನಿರ್ಗಮನ
"ನಾನು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ಹಾಗೂ ಅಧಿಕಾರದ ಶಾಂತಿಯುತ ವರ್ಗಾವಣೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ರಾಜಕೀಯ ಹಿಂಸಾಚಾರಕ್ಕೆ ಅಮೆರಿಕದಲ್ಲಿ ಅವಕಾಶವಿಲ್ಲ ಎಂದು ನಂಬುತ್ತೇನೆ. ಯಾವಾಗಲೂ ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇನೆ, ಪ್ರಜಾಪ್ರಭುತ್ವದ ರಕ್ಷಣೆಗೆ ನನ್ನ ಹೋರಾಟ ನಿರಂತರವಾಗಿರುತ್ತದೆ" ಎಂದರು.
ಇದನ್ನೂ ಓದಿ : ಪ್ರತಿಭಟನಾಕಾರರನ್ನು ಭಯೋತ್ಪಾದಕರು ಎಂದ ಜೋ ಬೈಡನ್ !
ಮುಂದಿನ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ, ಅಲ್ಲಿನ ವಾತಾವರಣ ಈಗಾಗಲೇ ಬಿಸಿಯಾಗಿದ್ದು, ಪರಸ್ಪರ ವಾಗ್ದಾಳಿ ಮುಂದುವರೆಯುತ್ತಿದೆ. ಇನ್ನೊಂದೆಡೆ, 2020 ರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡುವ ಪ್ರಯತ್ನಗಳಿಗಾಗಿ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದಾಗಿನಿಂದ ಟ್ರಂಪ್ ಅವರ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯನ್ನು ಬೈಡನ್ ಕಟುವಾಗಿ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ : ರಹಸ್ಯ ಸೇವೆಯ ಉದ್ಯೋಗಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ಜರ್ಮನ್ ಶೆಫರ್ಡ್ ಶ್ವಾನ ; ಇದು 11ನೇ ಪ್ರಕರಣ !