ಡಮಾಸ್ಕಸ್ : ಇಸ್ರೇಲಿ ಯುದ್ಧ ವಿಮಾನಗಳು ಡಮಾಸ್ಕಸ್‌ನ ಸೇನಾ ನೆಲೆಗಳ ಮೇಲೆ ರಾತ್ರೋರಾತ್ರಿ ದಾಳಿ ನಡೆಸಿದ್ದು, ಭಾರಿ ಹಾನಿಯನ್ನುಂಟು ಮಾಡಿವೆ ಎಂದು ಸಿರಿಯಾ ಮಿಲಿಟರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲಿನಿಂದ ದಾಳಿ ನಡೆಸಲಾಗಿದೆ. ಇಸ್ರೇಲ್ ಹಾರಿಸಿದ ಕೆಲ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸಿರಿಯಾ ಮಿಲಿಟರಿ ಹೇಳಿದೆ.
ಏತನ್ಮಧ್ಯೆ ಡಮಾಸ್ಕಸ್ ಸುತ್ತಮುತ್ತಲಿನ ಮಿಲಿಟರಿ ಸೈಟ್‌ಗಳ ಮೇಲೆ ಇಸ್ರೇಲ್ ಎರಡು ಹಂತಗಳಲ್ಲಿ ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಿತು. ದಾಳಿಯು ವಾಯು ರಕ್ಷಣಾ ನೆಲೆ ಮತ್ತು ಡಮಾಸ್ಕಸ್‌ನ ಗ್ರಾಮಾಂತರ ಮತ್ತು ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಮೆಹ್ ಪ್ರದೇಶದಲ್ಲಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಹೇಳಿದೆ. ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಇದು ಬ್ರಿಟನ್ ಮೂಲದ ವಾಚ್‌ಡಾಗ್ ಗ್ರೂಪ್ ಆಗಿದೆ.
ಇತ್ತೀಚಿನ ದಾಳಿಯೊಂದಿಗೆ 2023 ರ ಆರಂಭದಿಂದ ಇಸ್ರೇಲ್ ಸಿರಿಯಾದ ಮೇಲೆ 17 ಬಾರಿ ದಾಳಿ ಮಾಡಿದೆ. ಇಸ್ರೇಲ್ ದಾಳಿಗಳಲ್ಲಿ ಸಿರಿಯಾದ 48 ಮಿಲಿಟರಿ ಸಿಬ್ಬಂದಿ ಸಾವಿಗೀಡಾಗಿದ್ದು, 28 ಜನ ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ ಇರಾನ್ ಬೆಂಬಲಿತ ಶಿಯಾ ಹೋರಾಟಗಾರರ ನೆಲೆಗಳಿವೆ ಎಂದು ಹೇಳುವ ಇಸ್ರೇಲ್ ಅವುಗಳ ಮೇಲೆ ಕಳೆದ ಹಲವಾರು ವರ್ಷಗಳಿಂದ ದಾಳಿ ನಡೆಸುತ್ತಿದೆ.
ಇಸ್ರೇಲ್ ಮತ್ತು ಸೌದಿ ಮಧ್ಯೆ ಒಪ್ಪಂದ ಸಾಧ್ಯತೆ: ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧಗಳನ್ನು ಉತ್ತಮಪಡಿಸುವ ಒಪ್ಪಂದದ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ಮಾಜಿ ಮೊಸಾದ್ ಮುಖ್ಯಸ್ಥ ಯೋಸ್ಸಿ ಕೊಹೆನ್, ಅಂಥದೊಂದು ಒಪ್ಪಂದ ಏರ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದಿದ್ದಾರೆ. ಇನ್‌ಸ್ಟಿಟ್ಯೂಟ್ ಫಾರ್ ನ್ಯಾಷನಲ್ ಸೆಕ್ಯುರಿಟಿ ಸ್ಟಡೀಸ್‌ನಲ್ಲಿ ಮಾತನಾಡಿದ 2016-2021 ವರೆಗೆ ಇಸ್ರೇಲ್ನ ಅತ್ಯನ್ನತ ಗೂಢಚಾರನಾಗಿದ್ದ ಕೊಹೆನ್, ನನ್ನ ಅಭಿಪ್ರಾಯದಲ್ಲಿ ಮತ್ತು ವಿಷಯದ ಬಗ್ಗೆ ವೈಯಕ್ತಿಕ ಜ್ಞಾನದ ಆಧಾರದಲ್ಲಿ ಹೇಳುವುದಾದರೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದಿದ್ದಾರೆ.
ಇಸ್ರೇಲ್‌ನೊಂದಿಗೆ ಸಂಬಂಧಗಳನ್ನು ಸಂಪೂರ್ಣ ಸಾಮಾನ್ಯಗೊಳಿಸಲು ಸೌದಿಗಳು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅಧಿಕಾರ ವಹಿಸಿಕೊಂಡಾಗ ಸ್ಥಗಿತಗೊಂಡಿದ್ದ ಟ್ರಂಪ್ ಯುಗದ ಕೆಲವು ಶಸ್ತ್ರಾಸ್ತ್ರ ಒಪ್ಪಂದಗಳನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಮತ್ತು ನ್ಯಾಟೋದಂತೆಯೇ ಯುಎಸ್ ಜೊತೆ ರಕ್ಷಣಾ ಒಪ್ಪಂದವನ್ನು ಸಹ ಬಯಸುತ್ತಿದ್ದಾರೆ. ಹಾಗೆಯೇ ನಾಗರಿಕ ಪರಮಾಣು ಕಾರ್ಯಕ್ರಮಕ್ಕೆ ಅಮೆರಿಕವು ಅನುಮೋದನೆ ನೀಡಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ. ವಾಷಿಂಗ್ಟನ್ ಮತ್ತು ರಿಯಾದ್ ಎರಡೂ ಪ್ಯಾಲೇಸ್ಟಿನಿಯನ್ನರೊಂದಿಗೆ ರಾಜತಾಂತ್ರಿಕ ಮಾತುಕತೆಗಳನ್ನು ಪುನರಾರಂಭಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವುದು ಗಮನಾರ್ಹ.
ಕಳೆದ ವರ್ಷ ಐತಿಹಾಸಿಕ ಕ್ರಮವೊಂದರಲ್ಲಿ ಸೌದಿ ಅರೇಬಿಯಾ ತನ್ನ ವಾಯುಪ್ರದೇಶವನ್ನು ಇಸ್ರೇಲ್ನ ಎಲ್ಲಾ ನಾಗರಿಕ ವಿಮಾನಗಳ ಹಾರಾಟಕ್ಕಾಗಿ ಮುಕ್ತಗೊಳಿಸುವುದಾಗಿ ಘೋಷಿಸಿತು. ಇದಾಗಿ ಕೆಲವೇ ಗಂಟೆಗಳ ನಂತರ ಬೈಡನ್ ಇಸ್ರೇಲ್‌ನಿಂದ ಗಲ್ಫ್ ರಾಷ್ಟ್ರಕ್ಕೆ ನೇರವಾಗಿ ಹಾರಿದ ಮೊದಲ ಯುಎಸ್ ನಾಯಕನಾದರು.
ಇದನ್ನೂ ಓದಿ : ಸೆಂಗೊಲ್ನ ಸಾಂಕೇತಿಕತೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು: ಕಾಂಗ್ರೆಸ್ ಮುಖಂಡ ಶಶಿ ತರೂರ್