ಟೆಲ್ ಅವೀವ್ : ಇಸ್ರೇಲ್ ಮತ್ತು ಹಮಾಸ್ ನಡುವೆ ಕದನವಿರಾಮ ಮೂಡಿಸಲು ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮಾತುಕತೆಗಳು ಯಾವುದೇ ಫಲ ನೀಡಲು ವಿಫಲವಾಗಿವೆ. ಉಭಯ ದೇಶಗಳು ಪರಸ್ಪರರ ಬೇಡಿಕೆಗಳಿಗೆ ಒಪ್ಪಲು ನಿರಾಕರಿಸಿದ್ದರಿಂದ ಮಾತುಕತೆಗಳಿಗೆ ಅಡ್ಡಿಯಾಗಿದೆ. ಮೊಸ್ಸಾದ್ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಸೋಮವಾರ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಮತ್ತು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಅವರನ್ನು ವಾರ್ಸಾದಲ್ಲಿ ಭೇಟಿಯಾದ ನಂತರವೂ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ.
ಇಸ್ರೇಲ್ ಸೇನಾ ಪಡೆಗಳು ನಿರ್ದಿಷ್ಟ ಸ್ಥಾನಕ್ಕೆ ಮರಳಬೇಕು ಎಂಬ ಷರತ್ತನ್ನು ಹಮಾಸ್ ಉಗ್ರಗಾಮಿ ಗುಂಪು ಮುಂದಿಟ್ಟಿದೆ. ಆದರೆ ಷರತ್ತನ್ನು ಒಪ್ಪಲಾಗದು ಎಂದು ಇಸ್ರೇಲ್ ಸರ್ಕಾರದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯು ತನ್ನ ನೆಲದ ದಾಳಿಯನ್ನು ನಿಲ್ಲಿಸುವವರೆಗೂ ಯಾವುದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗದು ಎಂದು ಹಮಾಸ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿತ್ತು. ಮೂಲಗಳ ಪ್ರಕಾರ, ಹಮಾಸ್ ಸೂಚಿಸುವ ಬಂಧಿಗಳನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಇಸ್ರೇಲ್ ಮುಕ್ತವಾಗಿದೆ.
ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಜಾರಿಯಲ್ಲಿದ್ದ ಮಾನವೀಯ ಕದನ ವಿರಾಮದ ಸಮಯದಲ್ಲಿ ಇಸ್ರೇಲ್ ತಾನು ಬಯಸಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಳ್ಳುವ ಆಯ್ಕೆಯನ್ನು ಹೊಂದಿತ್ತು. ಇಸ್ರೇಲ್ ಮತ್ತು ಹಮಾಸ್ಗಳು ಮುಂದಿಟ್ಟ ಭಿನ್ನಾಭಿಪ್ರಾಯಗಳನ್ನು ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಸರಿಯಾಗಿ ಪರಿಹರಿಸಿದ ನಂತರವೇ ಮುಂದಿನ ಹಂತದ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ಇಸ್ರೇಲ್ ಸರ್ಕಾರಿ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
ಮಾನವೀಯ ಕದನ ವಿರಾಮದ ಸಮಯದಲ್ಲಿ 86 ಇಸ್ರೇಲಿ ಮತ್ತು 24 ವಿದೇಶಿ ಪ್ರಜೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು. ವಿದೇಶಿ ಪ್ರಜೆಗಳು ಸೇರಿದಂತೆ ಗಾಜಾದಲ್ಲಿ ಸುಮಾರು 129 ಜನರು ಬಂಧಿಗಳಾಗಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ಅಂದಾಜಿಸಿದ್ದಾರೆ.
ಇಸ್ರೇಲ್ನ ಮತ್ತಿಬ್ಬರು ಯೋಧರ ಸಾವು: ಉತ್ತರ ಗಾಜಾದಲ್ಲಿ ನಡೆಯುತ್ತಿರುವ ತೀವ್ರ ಹೋರಾಟದಲ್ಲಿ ಕಳೆದ ದಿನ ತನ್ನ ಮತ್ತಿಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಂಗಳವಾರ ಪ್ರಕಟಿಸಿದೆ. ಅಲೋನ್ ನ ವೆಸ್ಟ್ ಬ್ಯಾಂಕ್ ವಸಾಹತು ಪ್ರದೇಶದ ಪ್ಯಾರಾಟ್ರೂಪರ್ಸ್ ಬ್ರಿಗೇಡ್ ನ ಮೀಸಲು ಕಮಾಂಡೋ ಘಟಕದ ಸೈನಿಕ ಮಾಸ್ಟರ್ ಸಾರ್ಜೆಂಟ್ (ರಿಸರ್ವ್) ಡೇನಿಯಲ್ ಯಾಕೋವ್ ಬೆನ್ ಹರೋಶ್ (31) ಮತ್ತು ಕಾಂಬ್ಯಾಟ್ ಎಂಜಿನಿಯರಿಂಗ್ ಕಾರ್ಪ್ಸ್ ಯಹಲೋಮ್ ಘಟಕದ ಉಪ ಕಮಾಂಡರ್ ಕ್ಯಾಪ್ಟನ್ (ರಿಸರ್ವ್) ರೊಟೆಮ್ ಯೋಸೆಫ್ (24) ಹುತಾತ್ಮ ಸೈನಿಕರಾಗಿದ್ದಾರೆ. ಅಲ್ಲಿಗೆ ಯುದ್ಧದಲ್ಲಿ ಮೃತಪಟ್ಟ ಒಟ್ಟು ಇಸ್ರೇಲಿ ಸೈನಿಕರ ಸಂಖ್ಯೆ 131 ಕ್ಕೆ ಹೆಚ್ಚಳವಾಗಿದೆ.
ಇದನ್ನೂ ಓದಿ : 'ಸೋವಿಯತ್ ವಿರುದ್ಧ ಅಫ್ಘಾನ್ ಜಿಹಾದ್ಗೆ ರಹಸ್ಯ ನೆರವು ನೀಡಿತ್ತು ಯುಎಸ್': ರಹಸ್ಯ ದಾಖಲೆ ಬಹಿರಂಗ