ಟೆಲ್ ಅವೀವ್: ಗಾಝಾಕ್ಕೆ ತ್ವರಿತವಾಗಿ ಮಾನವೀಯ ಸಾಮಗ್ರಿಗಳನ್ನು ಪೂರೈಸಲು ಅನುಕೂಲ ಮಾಡಿಕೊಡಲು ಕೆರೆಮ್ ಶಲೋಮ್ ಗಡಿಯನ್ನು ಮುಕ್ತಗೊಳಿಸಲು ಇಸ್ರೇಲ್ ಸರಕಾರ ಒಪ್ಪಿಕೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ಕೆರೆಮ್ ಶಲೋಮ್ ಗಡಿಯನ್ನು ತೆರೆಯಲಾಗುವುದು ಎಂದು ಪ್ಯಾಲೆಸ್ಟೀನಿಯರೊಂದಿಗಿನ ನಾಗರಿಕ ಸಮನ್ವಯಕ್ಕಾಗಿ ಸ್ಥಾಪಿಸಲಾಗಿರುವ ಇಸ್ರೇಲ್ ಸಂಸ್ಥೆ ಕೋಗಟ್ (COGAT) ಹೇಳಿಕೆಯಲ್ಲಿ ತಿಳಿಸಿದೆ.
ಕೆರೆಮ್ ಶಲೋಮ್ ಮೂಲಕ ಸಾಗುವ ಸಾಮಗ್ರಿಗಳನ್ನು ತಪಾಸಣೆಯ ನಂತರ ಗಾಝಾದೊಳಗೆ ಬಿಡಲಾಗುವುದು ಎಂದು ಕೋಗಟ್ ಸಿವಿಲ್ ವಿಭಾಗದ ಮುಖ್ಯಸ್ಥ ಕರ್ನಲ್ ಎಲಾಡ್ ಗೊರೆನ್ ಹೇಳಿದ್ದಾರೆ. ಅಕ್ಟೋಬರ್ 7ರಂದು ಯುದ್ಧ ಭುಗಿಲೇಳುವ ಮೊದಲು ಗಾಝಾಗೆ ಹೋಗುವ ಶೇಕಡಾ 60 ಕ್ಕಿಂತ ಹೆಚ್ಚು ಟ್ರಕ್ ಲೋಡ್‌ಗಳನ್ನು ಸಾಗಿಸಲು ಕೆರೆಮ್ ಶಾಲೋಮ್ ಕ್ರಾಸಿಂಗ್ ಅನ್ನೇ ಬಳಸಲಾಗುತ್ತಿತ್ತು.
ಗಾಝಾಕ್ಕೆ ಪರಿಹಾರ ಸಾಮಗ್ರಿ ಸಾಗಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಮತ್ತು ಸಕಾರಾತ್ಮಕ ಬೆಳವಣಿಗೆ ಆಗಲಿವೆ ಎಂದು ವಿಶ್ವಸಂಸ್ಥೆಯ ಪರಿಹಾರ ಕಾರ್ಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಮಾಧ್ಯಮಗಳಿಗೆ ತಿಳಿಸಿದರು. ಜಿನೀವಾದಿಂದ ನೀಡಿದ ಹೇಳಿಕೆಯಲ್ಲಿ ಗ್ರಿಫಿತ್ಸ್, "ಇದು ನಾವು ಅನೇಕ ದಿನಗಳ ನಂತರ ನೋಡುತ್ತಿರುವ ಉತ್ತಮ ಬೆಳವಣಿಗೆಯಾಗಿದೆ ಮತ್ತು ಮಾನವೀಯ ಕಾರ್ಯಾಚರಣೆಗಳಿಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ಹೇಳಿದರು.
ಈಗಿರುವಂತೆ ರಾಫಾ ಗಡಿಯ ಮೂಲಕ ಮಾತ್ರ ಪರಿಹಾರ ಸಾಮಗ್ರಿ ಗಾಜಾ ಪಟ್ಟಿಯನ್ನು ತಲುಪುತ್ತಿದೆ. ಇದರಿಂದ ಆಹಾರ, ಔಷಧಿ ಮತ್ತು ಇಂಧನ ಸೇರಿದಂತೆ ಮಾನವೀಯ ಸಹಾಯ ಜನರಿಗೆ ತಲುಪಿಸಲು ವಿಳಂಬವಾಗುತ್ತಿದೆ.
ವೆಸ್ಟ್ ಬ್ಯಾಂಕ್ನಲ್ಲಿ ಘರ್ಷಣೆ - 6 ಪ್ಯಾಲೆಸ್ಟೈನಿಯರ ಸಾವು: ವೆಸ್ಟ್ ಬ್ಯಾಂಕ್ನ ತುಬಾಸ್ ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪಡೆಗಳು ಶುಕ್ರವಾರ ನಡೆಸಿದ ದಾಳಿಯಲ್ಲಿ ಕನಿಷ್ಠ ಆರು ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. "ದಕ್ಷಿಣ ತುಬಾಸ್ನಲ್ಲಿರುವ ಅಲ್-ಫರಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಸೈನಿಕರು ದಾಳಿ ನಡೆಸಿದ ನಂತರ ಹಲವಾರು ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ" ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಿಬಿರದಲ್ಲಿ ಪ್ಯಾಲೆಸ್ಟೈನಿಯರು ಮತ್ತು ಇಸ್ರೇಲಿ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ ಮತ್ತು ಈ ಸಮಯದಲ್ಲಿ ಭಾರಿ ಗುಂಡಿನ ದಾಳಿ ಮತ್ತು ಸ್ಫೋಟದ ಶಬ್ದಗಳು ಕೇಳಿಬಂದವು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಸ್ರೇಲ್ ಸೇನೆ ಘಟನೆಯ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ರಾಷ್ಟ್ರ ಹಿತಾಸಕ್ತಿ ವಿಷಯದಲ್ಲಿ ಮೋದಿಯವರ ಕಠಿಣ ನಿಲುವು ಶ್ಲಾಘನೀಯ: ಪುಟಿನ್