ಇಂಡಿಯಾನಾ (ಅಮೆರಿಕಾ): ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿ ಅಮೆರಿಕಾದ ಇಂಡಿಯಾನಾದಲ್ಲಿರುವ ವಸತಿ ನಿಲಯದಲ್ಲಿ ಕೊಲೆಯಾಗಿದ್ದಾರೆ. ಜೊತೆಗಿದ್ದ ಕೊರಿಯನ್ ವಿದ್ಯಾರ್ಥಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಡೇಟಾ ಸೈನ್ಸ್ ಓದುತ್ತಿದ್ದ ವರುಣ್ ಮನೀಶ್ ಛೇಡಾ(20) ಕೊಲೆಯಾದ ಭಾರತೀಯ ವಿದ್ಯಾರ್ಥಿ. ಕ್ಯಾಂಪಸ್‌ನ ಪಶ್ಚಿಮ ಅಂಚಿನಲ್ಲಿರುವ ಮೆಕ್ಕಚಿಯಾನ್ ಹಾಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊರಿಯಾದ ಜೂನಿಯರ್ ಸೈಬರ್ ಸೆಕ್ಯುರಿಟಿ ಮೇಜರ್ ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿರುವ ರೂಮ್‌ಮೇಟ್ ಜಿಮ್ಮಿ ಶಾ(22) ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ವರುಣ್ ಮನೀಶ್ ಛೇಡಾ ಮೇಲೆ ಚೂಪಾದ ಮತ್ತು ಬಲವಾದ ಆಯುಧಗಳಿಂದ ಹಲ್ಲೆ ಆಗಿರುವ ಗುರುತುಗಳು ಪತ್ತೆಯಾಗಿವೆ. ಈ ಹತ್ಯೆಯು ಪ್ರಚೋದಿತವಲ್ಲದ ಕೃತ್ಯ ಎಂದು ಪರ್ಡ್ಯೂ ವಿಶ್ವವಿದ್ಯಾಲಯದ ಪೊಲೀಸ್ ಮುಖ್ಯಸ್ಥ ಲೆಸ್ಲಿ ವೈಟೆ ಹೇಳಿದರು.
ವಿಶ್ವವಿದ್ಯಾನಿಲಯದ ಅಧ್ಯಕ್ಷ ಮಿಚ್ ಡೇನಿಯಲ್ಸ್, ಛೇಡಾ ಸಾವು ನಮ್ಮ ಕ್ಯಾಂಪಸ್‌ನಲ್ಲಿ ನಡೆದ ದುರ್ಘಟಯಾಗಿದ್ದು ಮನಸ್ಸಿಗೆ ಘಾಸಿಯಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಕ್ಯಾಲಿಪೋರ್ನಿಯಾದಲ್ಲಿ ಅಪಹರಿಸಿ ಕೊಲೆ: ಭಾರತೀಯ ಮೂಲದ 8 ತಿಂಗಳ ಮಗು ಸೇರಿ ನಾಲ್ವರ ಹತ್ಯೆ