ವಿಶ್ವಸಂಸ್ಥೆ/ಜಿನೀವಾ: ಮಣಿಪುರದ ಕುರಿತು ವಿಶ್ವಸಂಸ್ಥೆಯ ತಜ್ಞರ ಟೀಕೆಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಈಶಾನ್ಯ ರಾಜ್ಯದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಆ ಟೀಕೆಗಳು ಅನಗತ್ಯ, ಊಹೆ ಮತ್ತು ತಪ್ಪುದಾರಿಗೆಳೆಯುತ್ತವೆ ಎಂದು ಭಾರತ ಪ್ರತಿಪಾದಿಸಿದೆ. ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ವಿಶೇಷ ಕಾರ್ಯವಿಧಾನಗಳ ಶಾಖೆಗೆ ಸೋಮವಾರ ನೀಡಿದ ಮೌಖಿಕ ಟಿಪ್ಪಣಿಯಲ್ಲಿ, ಭಾರತ ಸರ್ಕಾರವು, ಮಣಿಪುರದಲ್ಲಿ ಪರಿಸ್ಥಿತಿ ಶಾಂತಿಯುತ ಮತ್ತು ಸ್ಥಿರವಾಗಿದೆ ಎಂದು ಒತ್ತಿ ಹೇಳಿದೆ. ಶಾಂತಿ ಕಾಪಾಡಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದೆ.
"ಮಣಿಪುರದ ಜನರು ಸೇರಿದಂತೆ ಭಾರತದ ಜನರ ಮಾನವ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಬದ್ಧವಾಗಿದೆ. ವಿಶ್ವಸಂಸ್ಥೆಯ ತಜ್ಞರ ಟೀಕೆಗಳು ಅನಗತ್ಯ, ಊಹೆ ಮತ್ತು ತಪ್ಪುದಾರಿಗೆಳೆಯುವಂತ ವಿಷಯವಾಗಿದೆ. ಮಣಿಪುರದ ಪರಿಸ್ಥಿತಿ ಮತ್ತು ಅದನ್ನು ಪರಿಹರಿಸಲು ಭಾರತ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸಂಪೂರ್ಣ ತಿಳಿವಳಿಕೆಯ ಕೊರತೆ, ಇದೆ ಎಂದು ವಿಶ್ವಸಂಸ್ಥೆಯ ಕಚೇರಿ ಮತ್ತು ಜಿನೀವಾದಲ್ಲಿನ ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತ ಸರ್ಕಾರ ಹೇಳಿದೆ.
ಭಾರತ ಸರ್ಕಾರದ ಪ್ರತಿಕ್ರಿಯೆ: ವಿಶ್ವಸಂಸ್ಥೆಯ ತಜ್ಞರ ಗುಂಪು, ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯ, ಕಾನೂನುಬಾಹಿರ ಹತ್ಯೆಗಳು, ಮನೆ ನಾಶ, ಬಲವಂತದ ಸ್ಥಳಾಂತರ, ಚಿತ್ರಹಿಂಸೆ ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗದ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಭಾರತ ಸರ್ಕಾರವು ಈ ಪ್ರತಿಕ್ರಿಯೆ ನೀಡಿದೆ.
'ವಿಶೇಷ ಕಾರ್ಯವಿಧಾನದ ಆದೇಶ ಹೊಂದಿರುವವರು (SPMH) ಭಾರತ: ಮಣಿಪುರದಲ್ಲಿ ನಿರಂತರ ಹಿಂಸಾಚಾರಗಳಿಂದ ಎಚ್ಚೆತ್ತ ವಿಶ್ವಸಂಸ್ಥೆಯ ತಜ್ಞರು' ಎಂಬ ಶೀರ್ಷಿಕೆಯ ಸುದ್ದಿ ಬಿಡುಗಡೆಯನ್ನು ಭಾರತ ತಿರಸ್ಕರಿಸಿದೆ. ಎಸ್ಪಿಎಂಎಚ್ಗಳು 60 ದಿನಗಳವರೆಗೆ ಕಾಯದೇ ಪತ್ರಿಕಾ ಪ್ರಕಟಣೆಯನ್ನು ನೀಡಲು ನಿರ್ಧರಿಸಿದ್ದಕ್ಕೆ ನಿರಾಶೆ ಮತ್ತು ಆಶ್ಚರ್ಯ ವ್ಯಕ್ತಪಡಿಸಿದೆ. ಆಗಸ್ಟ್ 29, 2023 ರಂದು ಇದೇ ವಿಷಯದ ಕುರಿತು ಹೊರಡಿಸಲಾದ ಜಂಟಿ ಸಂವಹನಕ್ಕೆ ಭಾರತ ಸರ್ಕಾರವು ಪ್ರತಿಕ್ರಿಯಿಸಿದೆ.
ಭವಿಷ್ಯದಲ್ಲಿ, ವಾಸ್ತವಾಂಶಗಳ ಆಧಾರದ ಮೇಲೆ ಎಸ್‌ಪಿಎಂಹೆಚ್ ತನ್ನ ಮೌಲ್ಯಮಾಪನದಲ್ಲಿ ಹೆಚ್ಚು ವಸ್ತುನಿಷ್ಠವಾಗಿರುತ್ತದೆ ಎಂದು ಭಾರತ ಸರ್ಕಾರ ಭರವಸೆ ವ್ಯಕ್ತಪಡಿಸಿದೆ. ಕಾನೂನು ಮತ್ತು ನಮ್ಮ ಜನರ ಮಾನವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ನಿರಂತರ ಬದ್ಧತೆ ಹೊಂದಿರುವ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತೀಯ ಕಾನೂನು ಜಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಕಾನೂನು ನಿಶ್ಚಿತತೆ, ಅಗತ್ಯತೆ ಮತ್ತು ತಾರತಮ್ಯದ ತತ್ವಗಳಿಗೆ ಅನುಗುಣವಾಗಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ಕಟ್ಟುನಿಟ್ಟಾಗಿ ಎದುರಿಸಲು ಬದ್ಧವಾಗಿವೆ ಎಂದು ಭಾರತ ಸರ್ಕಾರ ಹೇಳಿದೆ.
ಎಲ್ಲ ವಯಸ್ಸಿನ ನೂರಾರು ಮಹಿಳೆಯರು ಮತ್ತು ಹುಡುಗಿಯರನ್ನು ಮತ್ತು ಮುಖ್ಯವಾಗಿ ಕುಕಿ ಜನಾಂಗೀಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಲಿಂಗ ಆಧಾರಿತ ಹಿಂಸಾಚಾರದ ವರದಿಗಳು ಮತ್ತು ಚಿತ್ರಗಳಿಂದ ಗಾಬರಿಗೊಂಡಿದ್ದಾರೆ ಎಂದು ಯುಎನ್ ತಜ್ಞರು ಹೇಳಿದ್ದಾರೆ. ಹಿಂಸಾಚಾರವು ಸಾಮೂಹಿಕ ಅತ್ಯಾಚಾರ, ಮಹಿಳೆಯರ ಬೆತ್ತಲಾಗಿಸಿ ನಡೆಸಿದ ಮೆರವಣಿಗೆ ವಿಚಾರವು ಗಲಾಟೆ ಮತ್ತು ಸಾವು, ನೋವಿಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. (ಪಿಟಿಐ)
ಇದನ್ನೂ ಓದಿ: ಜಿ-20 ಶೃಂಗಸಭೆಗೆ ರಷ್ಯಾ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಗೈರು ಘೋಷಣೆ: ಚೀನಾ ನಡೆಗೆ ಅಮೆರಿಕದ ಬೇಸರ