ಭಾರತ ಅಕ್ಕಿ ನಿಷೇಧ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಅನೇಕ ಎನ್ಆರ್ಐಗಳು ಡಿಪಾರ್ಟ್ಮೆಂಟಲ್ ಸ್ಟೋರ್ಗಳಲ್ಲಿ ಅಕ್ಕಿ ಚೀಲಕ್ಕಾಗಿ ಮುಗಿಬಿದ್ದಿದ್ದು, ಇದು ಜನರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎನ್ಆರ್ಐ ಮತ್ತು ಏಷ್ಯಾ ದೇಶಗಳ ಜನರು ಅಮೆರಿಕದ ಸ್ಟೋರ್ಗಳಲ್ಲಿ ಅಕ್ಕಿ ಖರೀದಿಗೆ ನಿಂತಿದ್ದ ದೊಡ್ಡ ದೊಡ್ಡ ಸಾಲುಗಳ ಚಿತ್ರಗಳು ವೈರಲ್ ಆಗಿವೆ. ವಿದೇಶದಲ್ಲಿ ಉಂಟಾಗಿರುವ ಧಾನ್ಯಗಳ ಬಿಕ್ಕಟ್ಟು ಜಾಗತಿಕ ಆಹಾರ ಹಣದುಬ್ಬರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರ ತಜ್ಞರು ಊಹಿಸಿದ್ದಾರೆ.
ಈ ಪರಿಸ್ಥಿತಿಯ ಕುರಿತು ಮಾತನಾಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥ ಮತ್ತು ಅರ್ಥಶಾಸ್ತ್ರಜ್ಞ ಪಿಯರಿ ಆಲಿವರ್ ಗೌರಿಂಚಸ್, ಭಾರತದ ಈ ಕ್ರಮದಿಂದ ಆಹಾರ ಹಣದುಬ್ಬರಕ್ಕೆ ಕಾರಣವಾಗಲಿದ್ದು, ಈ ನಡೆಯನ್ನು ಪುನರ್ ಪರಿಶೀಲಿಸಬೇಕು ಎಂದಿದ್ದಾರೆ. ಭಾರತದ ಅಕ್ಕಿ ರಫ್ತು ನಿಷೇಧ ಇತರೆ ದೇಶದಲ್ಲಿ ಧಾನ್ಯಗಳ ಹಣದುಬ್ಬರಕ್ಕೆ ಕಾರಣವಾಗಲಿದೆ. ಜಾಗತಿಕವಾಗಿ ಧಾನ್ಯಗಳ ಬೆಲೆ ಶೇ 10-15ರಷ್ಟು ಏರಿಕೆ ಆಗಲಿದೆ ಎಂದಿದ್ದಾರೆ. ಈ ರೀತಿಯ ರಫ್ತು ನಿಯಮದಿಂದಾಗಿ ಜಾಗತಿಕವಾಗಿ ಹಾನಿಯಾಗಲಿದೆ. ಈ ಹಿನ್ನೆಲೆಯ್ಲಲಿ ಇದನ್ನು ತೆಗೆದು ಹಾಕುವಂತೆ ನಾವು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ವಿಶ್ವಸಂಸ್ಥೆ ಮತ್ತು ಟರ್ಕಿ ಜೊತೆಗಿನ ಬ್ಲಾಕ್ ಸೀ ಗ್ರೇನ್ (ಕಪ್ಪು ಸಮುದ್ರ ಧಾನ್ಯದ) ಒಪ್ಪಂದದಿಂದ ರಷ್ಯಾ ಹಿಂದೆ ಸರಿಯುತ್ತಿದ್ದಂತೆ ಭಾರತ ಅಕ್ಕಿ ರಫ್ತು ನಿಷೇಧಕ್ಕೆ ಮುಂದಾಗಿದೆ ಎಂಬುದು ಗಮನಿಸಬೇಕಾದ ವಿಷಯ ಎಂದಿದ್ದಾರೆ. ಕಳೆದ ವರ್ಷ ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಜಗತ್ತಿಗೆ ಧಾನ್ಯಗಳ ಪೂರೈಕೆಗಾಗಿ ಕಪ್ಪು ಸಮುದ್ರದ ಧಾನ್ಯದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಮೂಲಕ ಉಕ್ರೇನ್ನಿಂದ ಜಗತ್ತಿಗೆ 33 ಮಿಲಿಯನ್ ಟನ್ ಧಾನ್ಯವನ್ನು ಸಾಗಾಟ ಮಾಡುವ ಅಂದಾಜನ್ನು ಹೊಂದಲಾಗಿತ್ತು. ಇದು ಆಹಾರ ಬೆಲೆಯ ಒತ್ತಡ ನಿಯಂತ್ರಣದ ಜೊತೆಗೆ ಕಡಿಮೆ ಬೆಲೆಯಲ್ಲಿ ಆಹಾರ ಪಡೆಯಲು ಸಹಾಯ ಮಾಡಿತ್ತು. ಸದ್ಯ ಈ ಒಪ್ಪಂದವನ್ನು ತೆಗೆದುಹಾಕಲಾಗಿದೆ. ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಆಹಾರ ಬೆಲೆಗಳ ದರ ಮತ್ತು ಪೂರೈಕೆ ಮೇಲೆ ಒತ್ತಡಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದರಿಂದಾಗಿ ಧಾನ್ಯಗಳ ಬೆಲೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಭಾರತ ಸರ್ಕಾರ ದೇಶಿಯ ಮಾರುಕಟ್ಟೆಯಲ್ಲಿ ಅಕ್ಕಿ ದಾಸ್ತಾನಿನ ಲಭ್ಯತೆ ಕಡಿಮೆ ಇದ್ದು, ಆಂತರಿಕವಾಗಿ ಬೆಲೆ ನಿಯಂತ್ರಣ ಮಾಡುವ ಉದ್ದೇಶದಿಂದಾಗಿ ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧಿಸುವುದಾಗಿ ತಿಳಿಸಿತ್ತು. ಭಾರತದಿಂದ ಬಾಸ್ಮತಿಯೇತರ ಆಹಾರ ಧಾನ್ಯಗಳನ್ನು ರಫ್ತು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ದಕ್ಷಿಣಾ ಆಫ್ರಿಕಾ ಭಾಗದ ದೇಶಗಳು ಪ್ರಮುಖವಾಗಿದೆ. ಇದರ ನಂತರದಲ್ಲಿ ನೇಪಾಳ, ಬಾಂಗ್ಲಾದೇಶ, ಚೀನಾ, ಕೊಟಾ ಡಿ ಐವೊರಿ, ಟೊಗೊ, ಸೆನೆಗಲ್, ವಿಯೆಟ್ನಾ, ಮಡ್ಗಾಸ್ಕರ್, ಮಲೇಶಿಯಾ, ಯುಎಇ ದೇಶಗಳಿವೆ.
ಇದನ್ನೂ ಓದಿ: ಭಾರತದ ಅಕ್ಕಿ ರಫ್ತು ನಿಷೇಧದಿಂದ ಅಮೆರಿಕದಲ್ಲಿ ಎಫೆಕ್ಟ್: 'ಕುಟುಂಬಕ್ಕೊಂದೇ ಅಕ್ಕಿ ಚೀಲ'