ನ್ಯೂಯಾರ್ಕ್(ಅಮೆರಿಕಾ): ಭದ್ರತೆ, ಆರ್ಥಿಕತೆ, ರಾಜಕೀಯವಾಗಿ ಜರ್ಜರಿತವಾಗಿರುವ ಅಫ್ಘಾನಿಸ್ಥಾನಕ್ಕೆ ಭಾರತ ಈವರೆಗೂ 40 ಸಾವಿರ ಮೆಟ್ರಿಕ್ ಟನ್ ಗೋಧಿ, 32 ಟನ್ ಅಗತ್ಯ ಔಷಧಗಳು, 5 ಲಕ್ಷ ಕೊರೊನಾ ಡೋಸ್‌ಗಳನ್ನು ನೀಡಲಾಗಿದೆ. ನೆರೆಯ ರಾಷ್ಟ್ರದ ಜೊತೆಗಿನ ಸಂಬಂಧ ಮತ್ತು ಮಾನವೀಯ ನೆಲೆಯ ಮೇಲಿನ ನೆರವು ಇದಾಗಿದೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ದೇಶದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್, ಭದ್ರತೆ ಮತ್ತು ಆಹಾರ ಕೊರತೆ ಎದುರಿಸುತ್ತಿರುವ ಆಫ್ಘನ್ ಜನರ ಬೆಂಬಲವಾಗಿ ಭಾರತ ನಿಂತಿದೆ. ಮಾನವೀಯ ಸಂಬಂಧ, ಶಾಂತಿ ಮತ್ತು ಸ್ಥಿರತೆಯನ್ನು ದೇಶ ಎಂದಿಗೂ ಬೆಂಬಲಿಸಲಿದೆ. ನೆರೆಯ ದೇಶದ ದೀರ್ಘಕಾಲದ ಪಾಲುದಾರನಾಗಿ ಜವಾಬ್ದಾರಿಯನ್ನು ನಿಭಾಯಿಸಲಾಗಿದೆ ಎಂದು ಅವರು ಹೇಳಿದರು.
ಮಾನವೀಯ ನೆಲೆಯ ಆಧಾರದ ಮೇಲೆ ಭಾರತವು ಅಫ್ಘಾನಿಸ್ತಾನಕ್ಕೆ 10 ಹಂತಗಳಲ್ಲಿ 32 ಟನ್ ವೈದ್ಯಕೀಯ ನೆರವು ಒದಗಿಸಲಾಗಿದೆ. ಜೀವ ಉಳಿಸುವ ಅಗತ್ಯ ಔಷಧಗಳು, ಟಿಬಿ ನಿಯಂತ್ರಣ ಔಷಧಗಳು ಮತ್ತು ಕೊರೊನಾ ಲಸಿಕೆಯ 5 ಲಕ್ಷ ಡೋಸ್‌ಗಳನ್ನು ಆ ದೇಶಕ್ಕೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಈ ವೈದ್ಯಕೀಯ ನೆರವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಇದಲ್ಲದೇ, ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಕಾರ್ಯಕ್ರಮದಡಿ ಆಫ್ಘನ್ಗೆ ಈವರೆಗೂ 40 ಸಾವಿರ ಮೆಟ್ರಿಕ್ ಟನ್ ಗೋಧಿ ಸರಬರಾಜು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಆಗಸ್ಟ್ 15 ರಂದು ಅಮೆರಿಕ ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ಬಳಿಕ ತಾಲಿಬಾನ್ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಹೊಸ ಮಧ್ಯಂತರ ಸರ್ಕಾರವನ್ನು ರಚಿಸಿತು. ದೇಶ ಪ್ರಸ್ತುತ ತಾಲಿಬಾನ್ ಆಡಳಿತದಿಂದ ಆರ್ಥಿಕ, ಮಾನವೀಯ ಮತ್ತು ಭದ್ರತಾ ಬಿಕ್ಕಟ್ಟಿನಿಂದ ಬಳಲುತ್ತಿದೆ.
ಓದಿ: ಸಮಾಧಿಗಳ ನಡುವೆ ಗುಡಿಸಲು.. 30 ವರ್ಷಗಳಿಂದ ಶವಗಳ ಅಂತ್ಯಸಂಸ್ಕಾರ ನಡೆಸುವ ಅಚ್ಚಮ್ಮ