ಇಸ್ಲಾಮಾಬಾದ್( ಪಾಕಿಸ್ತಾನ): ಪಾಕಿಸ್ತಾನದಲ್ಲಿ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಸೇನಾ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿದ್ದ ಇಮ್ರಾನ್ ಖಾನ್, ಸೇನೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಕಳೆದ ವರ್ಷದಿಂದಲೇ ಖಾನ್ ರಾಜೀನಾಮೆಗೆ ಸೇನೆ ಸೂಚಿಸಿದೆ ಎಂಬ ವರದಿಗಳು ಆಗಾಗ ಹೊರಬೀಳುತ್ತಲೇ ಇದ್ದವು. ಆದರೂ ಇಮ್ರಾನ್ ಖಾನ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಸ್ವಪಕ್ಷೀಯರು, ಮಿತ್ರ ಪಕ್ಷಗಳು ಇಮ್ರಾನ್ ವಿರುದ್ಧ ತಿರುಗಿ ಬಿದ್ದಿವೆ.
ಪರಿಣಾಮ ಪಾಕಿಸ್ತಾನ ಸಂಸತ್ನಲ್ಲಿ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಅವರ ರಾಜಕೀಯ ಜೀವನವನ್ನೂ ಕೊನೆಗೊಳಿಸುವ ಉದ್ದೇಶದಿಂದ ಅಖಾಡಕ್ಕಿಳಿದಿವೆ. ಸ್ವಪಕ್ಷೀಯರು ಹಾಗೂ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿರುವ ಇಮ್ರಾನ್ ಖಾನ್, ಅವಿಶ್ವಾಸ ನಿರ್ಣಯ ಮಂಡನೆ ಹಿಂದೆ ವಿದೇಶೀ ಸರ್ಕಾರಗಳ ಕೈವಾಡ ಇದೆ ಎಂದು ನೇರ ಆರೋಪ ಮಾಡಿದ್ದು, ಅವರೊಂದಿಗೆ ಕೈ ಜೋಡಿಸಿದವರನ್ನ ದೇಶದ್ರೋಹಿಗಳು ಎಂದು ಜರಿದಿದ್ದಾರೆ.
ನಾಳೆಯೇ ಅವಿಶ್ವಾಸ ನಿರ್ಣಯದ ಮೇಲೆ ಮತದಾನ ಇದೆ. ಇಮ್ರಾನ್ ಖಾನ್ಗೆ ಪಾಕ್ ಸಂಸತ್ನಲ್ಲಿ ಸಂಖ್ಯಾ ಬಲ ಕೊರತೆ ಇದ್ದರೂ ಖಾನ್ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.
ಪ್ರತಿಪಕ್ಷಗಳಿಗೆ ಪಿಟಿಐ ಮಿತ್ರಪಕ್ಷಗಳಿಂದ ಬೆಂಬಲ: ವಿರೋಧ ಪಕ್ಷಗಳು ಈಗಾಗಲೇ ಆಡಳಿತಾರೂಢ ಪಿಟಿಐ ಪಕ್ಷದ ಮಿತ್ರಪಕ್ಷಗಳ ಬೆಂಬಲವನ್ನು ಪಡೆದುಕೊಂಡಿವೆ. ಅಷ್ಟೇ ಅಲ್ಲ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನಿಂದ ಪಕ್ಷಾಂತರಗೊಂಡವರು ಅವಿಶ್ವಾಸ ನಿರ್ಣಯದ ಪರ ಮತ ಹಾಕಲು ನಿರ್ಧರಿಸಿದ್ದಾರೆ.
ಪಾಕ್ ಸಂಸತ್ನಲ್ಲಿ ಪಕ್ಷಗಳ ಬಲಾಬಲ: 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರ ಉಳಿಸಿಕೊಳ್ಳಲು ಸರಳ ಬಹುಮತವಾದ 172 ಮತಗಳನ್ನು ಪಡೆಯಲೇಬೇಕಿದೆ. ಆದರೆ ಇಮ್ರಾನ್ ಖಾನ್ ಸರಳ ಬಹುಮತಕ್ಕೆ ಬೇಕಾದ ಮತಗಳನ್ನು ಪಡೆಯುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ವಿರೋಧ ಪಕ್ಷದ ಬಲ 164 ಇದೆ. ಆದರೆ ಅವುಗಳು ತಮ್ಮ ಬಲವನ್ನು ಈಗ 175 ಹೆಚ್ಚಿಸಿಕೊಂಡಿವೆ.
ಅಷ್ಟೇ ಅಲ್ಲ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದಿಂದ ಕೆಲವರು ಪಕ್ಷಾಂತರ ಮಾಡಿದ್ದು, ಭಾನುವಾರ ಪ್ರತಿಪಕ್ಷಗಳ ಕನಿಷ್ಠ ಬಲ 200ಕ್ಕೆ ಏರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೀಗಾಗಿ ಇಮ್ರಾನ್ಖಾನ್ ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ನಿರ್ಣಯ ಮತಕ್ಕೆ ಹಾಕುವ ಮುನ್ನ ರಾಜೀನಾಮೆ ಸಾಧ್ಯತೆಗಳೂ ತೀರಾ ಕಡಿಮೆ: ಆದಾಗ್ಯೂ ಇಮ್ರಾನ್ ಖಾನ್ ಹೋರಾಟವಿಲ್ಲದೆ ಕೆಳಗೆ ಇಳಿಯಲು ಬಯಸುವುದಿಲ್ಲ ಎನ್ನಲಾಗುತ್ತಿದೆ. ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳ ಕೂಟವನ್ನು ಅವರು ಭ್ರಷ್ಟರ ಕೂಟ ಎಂದು ಘೋಷಿಸಿದ್ದಾರೆ. ಇವರಿಗೆಲ್ಲ ನಮ್ಮ ಸರ್ಕಾರ ಕೆಡವಲು ವಿದೇಶಗಳಿಂದ ಹಣ ಬಂದಿದೆ ಎಂದು ಅವರು ಈಗಾಗಲೇ ಆರೋಪಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ, ಘನತೆ ಮತ್ತು ಸಾರ್ವಭೌಮತ್ವ ಉಳಿಸಲು ತಾವು ಕೊನೆವರೆಗೂ ಹೋರಾಟ ನಡೆಸುವುದಾಗಿ ಘೋಷಿಸಿರುವ ಅವರು, ತಮ್ಮ ಸರ್ಕಾರ ಪದಚ್ಯುತಿಗೊಳಿಸಲು, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ಶಕ್ತಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ರಷ್ಯಾ ಪ್ರವಾಸ ಹಾಗೂ ತಾವು ಪಾಶ್ಚಿಮಾತ್ಯ ಬಣದ ಭಾಗವಾಗಲು ನಿರಾಕರಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಎಂದು ಕೆರಳಿ ಕೆಂಡವಾಗಿದ್ದಾರೆ, ಇಮ್ರಾನ್ ಖಾನ್.
ಮುಂದಿನ ಚುನಾವಣೆಗೆ ಈಗಿನಿಂದಲೇ ಖಾನ್ ರಣತಂತ್ರ: ಮುಂಬರುವ ತಿಂಗಳುಗಳಲ್ಲಿ ನಡೆಯಲಿರುವ ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇಮ್ರಾನ್ ಖಾನ್ ಈಗಲೇ ಹೊಸ ಪ್ಲಾನ್ ಮಾಡುತ್ತಿದ್ದಾರೆ. ತಮಗೆ ಆದ ಅನ್ಯಾಯವನ್ನು ದೇಶದ ಮುಂದಿಡಲು ಅವರು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ಅವರು ನಾಳಿನ ಅವಿಶ್ವಾಸ ನಿರ್ಣಯವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಇಲ್ಲಿಂದಲೇ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ಜಿಂಕೆ ಕೊಂಬಿನ ರಕ್ತದಿಂದ ಪುಟಿನ್ ಸ್ನಾನ.. ಯಾಕಾಗಿ ಈ ಜಳಕ.. ಕೇಳಿದ್ರೆ ನೀವೂ ಬಿಡಲ್ಲ ಅನ್ನಿ!!