ವಾಷಿಂಗ್ಟನ್: ಎಚ್ -1 ಬಿ ವೀಸಾ ನೀಡುವ ವ್ಯವಸ್ಥೆಯನ್ನು "ಗುಲಾಮಗಿರಿಯ ಒಪ್ಪಂದ" ಎಂದು ಕರೆದಿರುವ ಭಾರತೀಯ-ಅಮೆರಿಕನ್ ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿ, 2024 ರಲ್ಲಿ ನಡೆಯುವ ಚುನಾವಣೆಯಲ್ಲಿ ತಾವು ಗೆದ್ದರೆ ಲಾಟರಿ ಆಧಾರಿತ ಎಚ್ -1 ಬಿ ವೀಸಾ ವ್ಯವಸ್ಥೆಯನ್ನು ರದ್ದುಗೊಳಿಸುವುದಾಗಿ ಮತ್ತು ಅರ್ಹತೆಯ ಆಧಾರದ ಮೇಲೆ ವೀಸಾ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ಭಾರತೀಯ ಐಟಿ ವೃತ್ತಿಪರರಿಂದ ಹೆಚ್ಚಿನ ಬೇಡಿಕೆ ಹೊಂದಿರುವ ಎಚ್ -1 ಬಿ ವೀಸಾ ವಲಸೆಯೇತರ ವೀಸಾವಾಗಿದ್ದು, ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಯುಎಸ್ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನೇ ಅವಲಂಬಿಸಿವೆ. ಸ್ವತಃ ರಾಮಸ್ವಾಮಿ ಅವರು ಇದೇ ವೀಸಾ ವ್ಯವಸ್ಥೆಯನ್ನು ತಮ್ಮ ಕಂಪನಿಗಾಗಿ 29 ಬಾರಿ ಬಳಸಿದ್ದಾರೆ.
2018 ರಿಂದ 2023 ರವರೆಗೆ, ಯುಎಸ್ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯು ರಾಮಸ್ವಾಮಿ ಅವರ ಕಂಪನಿ ರೋಯಿವಾಂಟ್ ಸೈನ್ಸ್ಗೆ ಎಚ್ -1 ಬಿ ವೀಸಾ ಅಡಿಯಲ್ಲಿ 29 ಉದ್ಯೋಗಿಗಳ ವೀಸಾಗಳನ್ನು ಅನುಮೋದಿಸಿದೆ. ಆದರೆ ಎಚ್ -1 ಬಿ ವ್ಯವಸ್ಥೆಯು ಕಂಪನಿಗಳು ಹಾಗೂ ಉದ್ಯೋಗಿಗಳು ಇಬ್ಬರಿಗೂ ಮಾರಕವಾಗಿದೆ ಎಂದು ರಾಮಸ್ವಾಮಿ ಹೇಳಿದ್ದಾರೆ.
"ಈಗಿನ ಲಾಟರಿ ವ್ಯವಸ್ಥೆಯನ್ನು ನಿಜವಾದ ಅರ್ಹತೆಯ ಆಧಾರದ ವ್ಯವಸ್ಥೆಯಿಂದ ಬದಲಾಯಿಸಬೇಕಾಗಿದೆ. ಇದು ಎಚ್ -1 ಬಿ ವಲಸಿಗರು ಅವರನ್ನು ಪ್ರಾಯೋಜಿಸಿದ ಕಂಪನಿಯ ಲಾಭಕ್ಕಾಗಿ ಮಾತ್ರ ಕೆಲಸಕ್ಕೆ ಸೇರುವ ಗುತ್ತಿಗೆ ಗುಲಾಮಗಿರಿಯ ಒಂದು ರೂಪವಾಗಿದೆ. ನಾನಿದನ್ನು ಅಂತ್ಯಗೊಳಿಸಲು ಬಯಸುವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಮಸ್ವಾಮಿ ಅವರು ಫೆಬ್ರವರಿ 2021 ರಲ್ಲಿ ರೊಯಿವಾಂಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಕೆಳಗಿಳಿದರು. ಆದರೆ ಈ ವರ್ಷದ ಫೆಬ್ರವರಿಯಲ್ಲಿ ಅವರು ತಮ್ಮ ಅಧ್ಯಕ್ಷೀಯ ಪ್ರಚಾರವನ್ನು ಆರಂಭಿಸುವವರೆಗೂ ಕಂಪನಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿದ್ದರು. ಮಾರ್ಚ್ 31 ರ ಹೊತ್ತಿಗೆ, ಕಂಪನಿಯು ಮತ್ತು ಅದರ ಅಂಗಸಂಸ್ಥೆಗಳು ಯುಎಸ್ನಲ್ಲಿ 825 ಸೇರಿದಂತೆ 904 ಪೂರ್ಣಕಾಲಿಕ ಉದ್ಯೋಗಿಗಳನ್ನು ಹೊಂದಿವೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಫೈಲಿಂಗ್ಗಳು ತಿಳಿಸಿವೆ.
ವಿಶ್ವಾದ್ಯಂತ ಎಚ್ -1 ಬಿ ವೀಸಾಗಳಿಗೆ ಅತ್ಯಧಿಕ ಬೇಡಿಕೆಯಿದೆ ಮತ್ತು ಈ ವೀಸಾದಡಿ ಬರುವ ಕಾರ್ಮಿಕರಿಗೆ ಅಮೆರಿಕದಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ. 2021 ರ ಹಣಕಾಸು ವರ್ಷದಲ್ಲಿ, ಯುಎಸ್ ಕಂಪನಿಗಳು ಲಭ್ಯವಿರುವ ಕೇವಲ 85,000 ವೀಸಾ ಸ್ಲಾಟ್ಗಳಿಗಾಗಿ 7,80,884 ಅರ್ಜಿಗಳನ್ನು ಸಲ್ಲಿಸಿವೆ. ಇದು ಶೇಕಡಾ 60 ಕ್ಕಿಂತ ಹೆಚ್ಚಾಗಿದೆ.
ಇದನ್ನೂ ಓದಿ : ಪತ್ನಿಗೆ ವಿಚ್ಛೇದನ ನೀಡಿದ ಗೂಗಲ್ ಸಹ-ಸಂಸ್ಥಾಪಕ ಬ್ರಿನ್; ಮಸ್ಕ್ರೊಂದಿಗೆ ಅಫೇರ್ ಕಾರಣ?