ಗಾಜಾಪಟ್ಟಿ: ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾ ಆಸ್ಪತ್ರೆಯನ್ನು ಹಮಾಸ್ ತನ್ನ ಪ್ರಮುಖ ಕಮಾಂಡ್ ಸೆಂಟರ್ ಆಗಿ ಬಳಸುತ್ತಿದೆ ಎಂದು ಆರೋಪಿಸುತ್ತಿರುವ ಇಸ್ರೇಲ್ ಇದಕ್ಕೆ ಬಲವಾದ ಪುರಾವೆಗಳನ್ನು ಬಹಿರಂಗಪಡಿಸುತ್ತಿದೆ. ಅಕ್ಟೋಬರ್ 7 ರಂದು ನಡೆಸಿದ ದಾಳಿಯಲ್ಲಿ ಬಂಧಿಗಳನ್ನಾಗಿ ಕರೆದುಕೊಂಡು ಬಂದ ಇಸ್ರೇಲಿಗರನ್ನು ಆಸ್ಪತ್ರೆಯಲ್ಲಿ ಒತ್ತೆಯಿಟ್ಟಿದೆ ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋವನ್ನು ಹಂಚಿಕೊಂಡಿರುವ ಇಸ್ರೇಲ್ ಭದ್ರತಾ ಪಡೆ (IDF), ಇಸ್ರೇಲ್ ಮೇಲಿನ ದಾಳಿಯ ಬಳಿಕ ಅಪಹರಿಸಲ್ಪಟ್ಟ ಕೆಲವು ಜನರನ್ನು ಅಲ್ ಶಿಫಾಗೆ ಎಳೆದು ತರುತ್ತಿರುವುದು ಅಲ್ಲಿನ ಸಿಸಿಟಿವಿ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಕ್ಟೋಬರ್ 7 ರಂದು ಬೆಳಗ್ಗೆ 10.42 ರಿಂದ 11 ಗಂಟೆಯ ನಡುವೆ ಅಲ್ ಶಿಫಾ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯಗಳು ದಾಖಲಾಗಿವೆ.
ಬಂದೂಕುಗಳನ್ನು ಹಿಡಿದಿರುವ ಹಮಾಸ್ ಭಯೋತ್ಪಾದಕರು ವ್ಯಕ್ತಿಯೊಬ್ಬನನ್ನು ಆಸ್ಪತ್ರೆಯೊಳಗೆ ಬಲವಂತವಾಗಿ ಕರೆದು ತರುವ ದೃಶ್ಯ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ಇನ್ನೊಬ್ಬ ಒತ್ತೆಯಾಳನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುತ್ತಿರುವುದು ವಿಡಿಯೋ ತೋರಿಸುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ ಐಡಿಎಫ್ ಸೇನಾ ವಕ್ತಾರ ಡೇನಿಯಲ್ ಹಗರಿ, ಹಮಾಸ್ ಒತ್ತೆಯಲ್ಲಿರುವ ವ್ಯಕ್ತಿಗಳು ನೇಪಾಳ ಮತ್ತು ಥಾಯ್ಲೆಂಡ್ ಮೂಲದವರು. ಈಗ ಅವರಿಬ್ಬರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿಲ್ಲ. ಅವರು ಎಲ್ಲಿದ್ದಾರೆ ಎಂದೂ ತಿಳಿದಿಲ್ಲ. ಇಸ್ರೇಲ್ ಮೇಲೆ ದಾಳಿ ಮಾಡಿದ ದಿನ ಅವರನ್ನು ಅಲ್-ಶಿಫಾ ಆಸ್ಪತ್ರೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಕೆಳಗೆ ಸುರಂಗ ಪತ್ತೆ: ಆಸ್ಪತ್ರೆಯನ್ನು ಕಮಾಂಡ್ ಸೆಂಟರ್ ಆಗಿ ಹಮಾಸ್ ಬಳಸುತ್ತಿದೆ ಎಂದು ಹೇಳಿ ದಾಳಿ ನಡೆಸಿದ ಇಸ್ರೇಲ್ ಸೇನೆ ಅಲ್ ಶಿಫಾದ ಕೆಳಗೆ ದೊಡ್ಡ ಸುರಂಗವನ್ನು ಪತ್ತೆ ಮಾಡಿದ್ದಾರೆ. ಇದರ ವಿಡಿಯೋವನ್ನು ಐಡಿಎಫ್ ಹಂಚಿಕೊಂಡಿದೆ. ಆದರೆ, ಸುರಂಗದೊಳಗೆ ಏನಿದೆ ಎಂಬುದನ್ನು ಬಹಿರಂಗ ಮಾಡಿಲ್ಲ. ಡ್ರೋನ್ ಕ್ಯಾಮೆರಾವನ್ನು ಸುರಂಗದೊಳಗೆ ಬಿಡಲಾಗಿದ್ದು, ಪರಿಶೀಲನೆ ನಡೆಸಲಾಗಿದೆ.
ಈ ಸುರಂಗವು ಆಸ್ಪತ್ರೆಯ ಕೆಳಗೆ ಇದ್ದು, 55 ಮೀಟರ್ ಉದ್ದ ಮತ್ತು 10 ಮೀಟರ್ ಆಳವಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸುರಂಗದೊಳಗೆ ಏನಿದೆ, ಅದು ಮುಂದೆ ಎಲ್ಲಿಗೆ ಸಾಗುತ್ತದೆ ಎಂಬುದನ್ನು ಐಡಿಎಫ್ ತಿಳಿಸಿಲ್ಲ. ಮತ್ತೊಂದೆಡೆ, ಹಮಾಸ್ ಉಗ್ರರ ವಿರುದ್ಧ ನಡೆಯುತ್ತಿರುವ ಭೂ ಕಾರ್ಯಾಚರಣೆಯಲ್ಲಿ ಐವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. ಇದುವರೆಗೆ ಇಸ್ರೇಲ್ನ 64 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಐಡಿಎಫ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಸಾಕಿನ್ನು ಸಾವುನೋವು, ತಕ್ಷಣ ಕದನ ವಿರಾಮ ಜಾರಿಯಾಗಲಿ: ವಿಶ್ವಸಂಸ್ಥೆ ಪ್ರ.ಕಾರ್ಯದರ್ಶಿ ಗುಟೆರೆಸ್