ಜಿನೀವಾ: ಪುರುಷ ಸಲಿಂಗಕಾಮಿಗಳು ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ವಿಶ್ವಾದ್ಯಂತ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ನಿಯಂತ್ರಣ ಮೀರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪುರುಷ ಸಲಿಂಗಕಾಮಿಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಸೋಂಕು ತಗುಲದಂತೆ ಎಲ್ಲ ಸಂಪರ್ಕಗಳಿಂದ ದೂರವಿರುವುದೇ ಮಂಕಿಪಾಕ್ಸ್ ತಡೆಗಟ್ಟುವ ಪರಿಣಾಮಕಾರಿ ಉಪಾಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರೆಸಿಯಸ್ ಹೇಳಿದ್ದಾರೆ. ಮಂಕಿಪಾಕ್ಸ್ ಸೋಂಕು ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಕಳೆದ ಶನಿವಾರ ಅವರು ಘೋಷಿಸಿದ್ದರು.
"ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (gay-ಗೇ) ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಹಾಗೆಯೇ ಹೊಸ ಸಂಗಾತಿಗಳೊಂದಿಗೆ ಸಂಪರ್ಕ ಬೆಳೆಸುವುದನ್ನು ತಡೆಗಟ್ಟುವ ಬಗ್ಗೆ ಯೋಚಿಸಬೇಕು. ಯಾವುದೇ ಹೊಸ ಸಂಗಾತಿಗಳೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೂ ಅವರೊಂದಿಗೆ ಮೊಬೈಲ್ ಸಂಪರ್ಕ ಸಂಖ್ಯೆಯನ್ನು ಹಂಚಿಕೊಳ್ಳಬೇಕು. ಒಂದು ವೇಳೆ ಅಗತ್ಯ ಬಿದ್ದಲ್ಲಿ ಮುಂದಿನ ಪ್ರಕ್ರಿಯೆಗಳಿಗೆ ಇದರಿಂದ ಅನುಕೂಲವಾಗುತ್ತದೆ" ಎಂದು ಘೆಬ್ರೆಸಿಯಸ್ ತಿಳಿಸಿದರು.
ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆಯು ಸ್ಥಳೀಯವಾಗಿದ್ದು, ಮೇ ತಿಂಗಳ ಆರಂಭದಿಂದ ಈ ಸೋಂಕು ವಿಶ್ವದ ಇತರ ದೇಶಗಳಲ್ಲಿಯೂ ವ್ಯಾಪಿಸುತ್ತಿದೆ.
ಹೊಸ ಪ್ರಕರಣಗಳ ಸಂಖ್ಯೆ: ಬುಧವಾರದಂದು ಜಗತ್ತಿನ 78 ದೇಶಗಳಲ್ಲಿ ಒಟ್ಟು 18,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಶೇ 70ರಷ್ಟು ಯುರೋಪ್ ಹಾಗೂ ಶೇ 25 ರಷ್ಟು ಅಮೆರಿಕದಲ್ಲಿ ಕಾಣಿಸಿಕೊಂಡಿವೆ. ಮೇ ತಿಂಗಳಿನಿಂದ ಈವರೆಗೆ 5 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಾಯಿಲೆ ಬಂದ ಶೇ 10 ರಷ್ಟು ರೋಗಿಗಳು ಇದರ ವೇದನೆ ತಡೆಯಲಾಗದೆ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ ಎಂದು ಘೆಬ್ರೆಸಿಯಸ್ ಹೇಳಿದರು.
ಪುರುಷ ಸಲಿಂಗಿಗಳಿಗೆ ಹೆಚ್ಚು ಅಪಾಯ: ಶೇ 98 ರಷ್ಟು ಮಂಕಿಪಾಕ್ಸ್ ಪ್ರಕರಣಗಳು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ಪುರುಷ ಸಲಿಂಗಕಾಮಿಗಳಲ್ಲಿಯೇ ಕಂಡುಬಂದಿವೆ. ಸೋಂಕಿತರಲ್ಲಿ ಶೇ 98 ರಷ್ಟು ಜನ ಸಲಿಂಗಕಾಮಿ ಅಥವಾ ಉಭಯಲಿಂಗಿ ಪುರುಷರಾಗಿದ್ದಾರೆ. ಅದರಲ್ಲೂ ಶೇ 95 ರಷ್ಟು ಪ್ರಕರಣಗಳಲ್ಲಿ ಲೈಂಗಿಕ ಸಂಪರ್ಕದಿಂದಲೇ ಸೋಂಕು ಹರಡಿರುವುದು ಕಂಡು ಬಂದಿದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಕಳೆದ ವಾರ ಪ್ರಕಟವಾದ ಅಧ್ಯಯನಾ ವರದಿಯೊಂದರಲ್ಲಿ ತಿಳಿಸಲಾಗಿದೆ.
ಮಂಕಿಪಾಕ್ಸ್ ಸೋಂಕಿನಿಂದ ಶರೀರದ ಮೇಲೆ ಕೆಂಪಾದ ಹುಣ್ಣುಗಳಾಗುತ್ತವೆ. ಬಹುತೇಕ ಸಮಯದಲ್ಲಿ ಇದು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ದೈಹಿಕ ಸಂಪರ್ಕದಿಂದ ಹರಡಿರುವುದು ಕಂಡು ಬಂದಿದೆ. ಆದಾಗ್ಯೂ ಮಂಕಿಪಾಕ್ಸ್ ಅನ್ನು ಲೈಂಗಿಕವಾಗಿ ಹರಡುವ ಸೋಂಕು ಎಂದು ಘೋಷಿಸಲಾಗಿಲ್ಲ.
ಯಾರಿಗಾದರೂ ಬರಬಹುದು: ಆದಾಗ್ಯೂ ಮಂಕಿಪಾಕ್ಸ್ ಯಾರಿಗಾದರೂ ಬರಬಹುದು. ಸೋಂಕಿತ ನಿಕಟ ಸಂಪರ್ಕಕ್ಕೆ ಬರುವ ಯಾರಿಗಾದರೂ ಸೋಂಕು ತಗುಲಬಹುದು ಎನ್ನುತ್ತಾರೆ ಘೆಬ್ರೆಸಿಯಸ್. ಮಕ್ಕಳು, ಗರ್ಭಿಣಿಯರು ಹಾಗೂ ರೋಗನಿರೋಧಕ ಶಕ್ತಿ ಕಳೆದುಕೊಂಡವರಿಗೆ ಈ ರೋಗ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವದ ದೇಶಗಳಿಗೆ ಅವರು ಮನವಿ ಮಾಡಿದ್ದಾರೆ.