ಕೀವ್, ಉಕ್ರೇನ್: ಕೀವ್ ಹೊರವಲಯದ ಬ್ರೋವರಿ ಪಟ್ಟಣದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಉಕ್ರೇನ್‌ನ ಆಂತರಿಕ ಸಚಿವರು ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ನರ್ಸರಿ ಮತ್ತು ವಸತಿ ಕಟ್ಟಡದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಕೀವ್ ಪ್ರದೇಶದ ಗವರ್ನರ್ ಬುಧವಾರ ಹೇಳಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ 10 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಇತರ ಎಂಟು ಮಂದಿ ಇದ್ದರು ಎಂದು ಉಕ್ರೇನ್‌ನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಹೋರ್ ಕ್ಲೈಮೆಂಕೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ಉಪ ಮಂತ್ರಿ ಯೆವ್ಹೆನ್ ಯೆನಿನ್ ಮತ್ತು ರಾಜ್ಯ ಕಾರ್ಯದರ್ಶಿ ಯೂರಿ ಲುಬ್ಕೋವಿಚ್ ಕೂಡ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಕ್ಲೈಮೆಂಕೊ ಹೇಳಿದರು.
ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಯಾರು?: ಉಕ್ರೇನ್ ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿಯನ್ನು 2021 ರಲ್ಲಿ ಝೆಲೆನ್ಸ್ಕಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಮತ್ತು ಝೆಲೆನ್ಸ್ಕಿಯ ಕ್ಯಾಬಿನೆಟ್ನಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು. ಉಕ್ರೇನ್‌ನೊಳಗಿನ ಪೊಲೀಸ್ ಮತ್ತು ಭದ್ರತೆಯ ಜವಾಬ್ದಾರಿಯನ್ನು ಹೊಂದಿದ್ದ ಮೊನಾಸ್ಟಿರ್ಸ್ಕಿ, ಯುದ್ಧ ಪ್ರಾರಂಭವಾದ ನಂತರ ಮೃತಪಟ್ಟ ಅತ್ಯಂತ ಹಿರಿಯ ಉಕ್ರೇನಿಯನ್ ಅಧಿಕಾರಿಯಾಗಿದ್ದಾರೆ. ಗೃಹ ಸಚಿವರನ್ನು ಹೊತ್ತ ಹೆಲಿಕಾಪ್ಟರ್ ಬ್ರೋವರಿ ಪಟ್ಟಣದ ಮೂಲಕ ಹಾದು ಹೋಗುವಾಗ ವಸತಿ ಕಟ್ಟಡದ ಬಳಿ ಅಪಘಾತಕ್ಕೀಡಾಗಿದೆ. ಮೊನಾಸ್ಟಿರ್ಸ್ಕಿಯ ಮೊದಲ ಸಚಿವ ಯೆವ್ಹೆನಿ ಯೆನಿನ್ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
’’ಬ್ರೋವರಿಯಲ್ಲಿನ ಕಡಿಮೆ ಗೋಚರತೆಯ ಕಾರಣದಿಂದ ಈ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರಬಹುದು ಪೀಟರ್ ಜಲ್ಮಾಯೆವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದಾಗ್ಯೂ, ಈ ಘಟನೆ ಬಹಳ ಅನುಮಾನಾಸ್ಪದವಾಗಿದೆ. ಕೃತ್ಯದ ಹಿಂದೆ ರಷ್ಯಾ ಒಕ್ಕೂಟದ ಸಂಭವನೀಯ ಭಯೋತ್ಪಾದಕ ಕೃತ್ಯವನ್ನು ತಳ್ಳಿಹಾಕುವುದಿಲ್ಲ‘‘ ಎಂದು ಯುರೇಷಿಯಾ ಡೆಮಾಕ್ರಸಿ ಇನಿಶಿಯೇಟಿವ್‌ನ ವಿಶ್ಲೇಷಕರು ಹೇಳಿದ್ದಾರೆ.
ಜಲ್ಮಾಯೆವ್ ಪ್ರಕಾರ, ಹೆಲಿಕಾಪ್ಟರ್ ಪೈಲಟ್‌ಗಳು ಅವರು ಹಾರುವ ಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಸರಿಯಾಗಿಯೇ ತಿಳಿದುಕೊಂಡಿದ್ದರು. ಯಾವ ಅಗತ್ಯ ಕಾರ್ಯಾಚರಣೆಗಾಗಿ ಉಕ್ರೇನ್‌ನ ಆಂತರಿಕ ಸಚಿವರು ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುತ್ತಿದ್ದರು ಎಂಬುದರ ಬಗ್ಗೆ ಉಕ್ರೇನ್ ಸರ್ಕಾರ ಏನನ್ನೂ ಹೇಳುತ್ತಿಲ್ಲ.
ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಉಕ್ರೇನ್ ಕಡೆಯಿಂದ ಯಾವುದೇ ಗಂಭೀರ ಪ್ರಸ್ತಾಪಗಳು ಮಾಸ್ಕೋ ಬಳಿಗೆ ಇನ್ನೂ ಬಂದಿಲ್ಲ ಮತ್ತು ಈ ವಿಷಯದ ಬಗ್ಗೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಲೋಚನೆಗಳು ಸ್ವೀಕಾರಾರ್ಹವಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳೊಂದಿಗೆ ಯುದ್ಧದ ಬಗ್ಗೆ ಚರ್ಚಿಸಲು ಮತ್ತು ರಷ್ಯಾದ ವ್ಯಾಪಕ ಭದ್ರತಾ ಕಾಳಜಿಗಳನ್ನು ಹೊರತುಪಡಿಸಿ ಯಾವುದೇ ಗಂಭೀರ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸಲು ಮಾಸ್ಕೋ ಸಿದ್ಧವಾಗಿದೆ ಎಂದು ಲಾವ್ರೊವ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಮಾಸ್ಕೋದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಾವ್ರೊವ್, ಉಕ್ರೇನ್ ಮತ್ತು ರಷ್ಯಾದ ಗಡಿಗಳಿಗೆ ಸಮೀಪವಿರುವ ಇತರ ದೇಶಗಳಿಂದ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ತೆಗೆದುಹಾಕುವಂತೆ ನ್ಯಾಟೋಗೆ ಮತ್ತೊಮ್ಮೆ ಕರೆ ನೀಡಿದರು. ಕಳೆದ 10 ತಿಂಗಳಿಂದ ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದೆ. ಹೀಗಾಗಿ ಎರಡೂ ಕಡೆ ಅಪಾರ ಸಾವು- ನೋವು ಸಂಭವಿಸಿವೆ.
ಇದನ್ನೂ ಓದಿ: ರಷ್ಯಾದಿಂದ ಪ್ರತೀಕಾರದ ಕ್ಷಿಪಣಿ ದಾಳಿ: 600ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು