ಗಾಜಾಪಟ್ಟಿ: ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದಲ್ಲಿ 20 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುವುದು ದುಸ್ಥರವಾಗಿದೆ. ಈಗಾಗಲೇ ಕೊನೆಯ ಜನರೇಟರ್ನಲ್ಲಿನ ಇಂಧನ ಖಾಲಿಯಾಗಿ 1 ಮಗು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ಮಕ್ಕಳ ರಕ್ಷಣೆಗೆ ಬರುವುದಾಗಿ ಹೇಳಿದ್ದ ಇಸ್ರೇಲ್ ನೆರವು ನೀಡುತ್ತಿಲ್ಲ ಎಂದು ಅಲ್ಲಿನ ವೈದ್ಯರು ಆರೋಪಿಸಿದ್ದಾರೆ. ಇದನ್ನು ಇಸ್ರೇಲ್ ಪಡೆ ನಿರಾಕರಿಸಿದೆ.
ಶಿಫಾ ಆಸ್ಪತ್ರೆಯನ್ನು ಹಮಾಸ್ ಉಗ್ರರು ಬಂಕರ್ ಆಗಿ ಬಳಸುತ್ತಿದ್ದಾರೆ. ನೆಲಮಾಳಿಗೆಯಲ್ಲಿ ಪೋಸ್ಟ್ಗಳನ್ನು ಸ್ಥಾಪಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಸೇನೆ ಆಸ್ಪತ್ರೆಯ ಸುತ್ತ ಬಾಂಬ್ ದಾಳಿ ನಡೆಸುತ್ತಿದೆ. ಇದರಿಂದ ಅಲ್ಲಿಗೆ ತೆರಳಬೇಕಿದ್ದ ವಿದ್ಯುತ್, ವೈದ್ಯಕೀಯ ಸಲಕರಣೆಗಳು ಸ್ಥಗಿತವಾಗಿವೆ. ಇದರಿಂದ ಆಸ್ಪತ್ರೆ ಅಂಧಕಾರದಲ್ಲಿ ಮುಳುಗಿದೆ.
ಒತ್ತೆಯಾಳಾಗಿರುವ 240 ಇಸ್ರೇಲಿಗರನ್ನು ಬಿಡುಗಡೆ ಮಾಡುವವರೆಗೆ ಕದನ ವಿರಾಮವನ್ನು ನೀಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಎಚ್ಚರಿಕೆ ನೀಡಿದ್ದು, ಗಾಜಾದಲ್ಲಿ ಹಮಾಸ್‌ನ 16 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಗುರಿಯೊಂದಿಗೆ ಯುದ್ಧವನ್ನು ಮುಂದುವರಿಸುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಶಿಫಾ ಆಸ್ಪತ್ರೆಯ ಸುತ್ತಲೂ ಭಾರೀ ವೈಮಾನಿಕ ಮತ್ತು ಶೆಲ್ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಸಾವಿನ ದವಡೆಯಲ್ಲಿ ಶಿಶುಗಳು: ಗಾಜಾದ ಅತಿದೊಡ್ಡ ಆಸ್ಪತ್ರೆಯೊಳಗೆ ಸಿಲುಕಿರುವ ಆರೋಗ್ಯ ಅಧಿಕಾರಿಗಳು, ಜನರು ಮತ್ತು ಶಿಶುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಹೇಳಿದ್ದ ಇಸ್ರೇಲ್ ಮಾತು ತಪ್ಪಿದೆ. ಇನ್‌ಕ್ಯುಬೇಟರ್‌ಗಳು ವಿದ್ಯುತ್ ಇಲ್ಲದೇ ನಿಷ್ಕ್ರಿಯವಾಗಿವೆ. ಅಗತ್ಯ ವಸ್ತುಗಳು ಖಾಲಿಯಾಗಿವೆ. ರೋಗಿಗಳು, ಶಿಶುಗಳು ಸಾವಿನ ದವಡೆಯಲ್ಲಿದ್ದಾರೆ ಎಂದು ಅಲ್ಲಿನ ವೈದ್ಯರು ಅಳಲು ತೋಡಿಕೊಂಡಿದ್ದಾರೆ.
ಇಸ್ರೇಲ್ ಪುರಾವೆಗಳನ್ನು ನೀಡದೇ, ಹಮಾಸ್ ಉಗ್ರರು ಆಸ್ಪತ್ರೆಯ ಕೆಳಗೆ ಪೋಸ್ಟ್ಗಳನ್ನು ಹೊಂದಿದ್ದಾರೆ ಎಂದು ಹೇಳುತ್ತಿದೆ. ಇಲ್ಲಿ ಯಾವ ಉಗ್ರರೂ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿನ ಕೊನೆಯ ಜನರೇಟರ್ ಇಂಧನ ಖಾಲಿಯಾಗಿದೆ. ಮೂರು ಶಿಶುಗಳು ಮತ್ತು ನಾಲ್ಕು ರೋಗಿಗಳು ಬಲಿಯಾಗಿದ್ದಾರೆ. ಇನ್ನು 36 ಶಿಶುಗಳು ಪ್ರಾಣ ಕಳೆದುಕೊಳ್ಳುವ ಅಪಾಯವಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್ ಆಸ್ಪತ್ರೆ ಸುತ್ತ ದಾಳಿ ನಡೆಸುತ್ತಿರುವುದರಿಂದ ಆಂಬ್ಯುಲೆನ್ಸ್‌ಗಳು ಒಳಗೆ ಬರಲು ಮತ್ತು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇಸ್ರೇಲ್ ದಾಳಿ ನಿಲ್ಲಿಸಿ ಇಂಧನ ಪೂರೈಸಬೇಕಿದೆ. ಶಿಫಾ ಆಸ್ಪತ್ರೆಯೊಳಗೆ 1,500ಕ್ಕೂ ಅಧಿಕ ರೋಗಿಗಳು, 1,500 ವೈದ್ಯಕೀಯ ಸಿಬ್ಬಂದಿ ಸೇರಿ 20,000 ಜನರು ಅಲ್ಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸೌಕರ್ಯ ನಿರಾಕರಿಸುತ್ತಿರುವ ಆಸ್ಪತ್ರೆ: ಆಸ್ಪತ್ರೆಗೆ ಬೇಕಾಗಿರುವ ತುರ್ತು ಸೌಕರ್ಯಗಳನ್ನು ಯುದ್ಧದ ನಡುವೆಯೂ ಸರಬರಾಜು ಮಾಡಲಾಗುತ್ತಿದೆ. ಇನ್ಕ್ಯುಬೇಟರ್ನಲ್ಲಿರುವ ನವಜಾತ ಶಿಶುಗಳ ರಕ್ಷಣೆಗೆ ಬೇಕಾಗಿರುವ ಜನರೇಟರ್‌ಗಳಿಗೆ 300 ಲೀಟರ್ ಇಂಧನ ಕೊಡಲಾಗಿದೆ. ಆದರೆ, ಹಮಾಸ್ ಆಸ್ಪತ್ರೆಗೆ ಇಂಧನವನ್ನು ಪಡೆಯಲು ತಡೆಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿರುವ ಇಸ್ರೇಲ್ ಪ್ರಧಾನಿ, ಶಿಶುಗಳು ಸೇರಿದಂತೆ ನೂರಕ್ಕಿಂತಲೂ ಹೆಚ್ಚು ಜನರನ್ನು ಶಿಫಾ ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ. ಜನರ ರಕ್ಷಣೆಗೆ ಸುರಕ್ಷಿತ ಕಾರಿಡಾರ್‌ಗಳನ್ನು ರಚಿಸಲಾಗಿದೆ. ಹಮಾಸ್ ಅಲ್ಲಿನ ರೋಗಿಗಳನ್ನು ಮಾನವ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: ಏಳು ಸೈನಿಕರು ಸೇರಿದಂತೆ 17 ಜನರಿಗೆ ಗಾಯ