ಲಹೈನಾ (ಹವಾಯಿ) : ಅಮೆರಿಕದ ಪೆಸಿಫಿಕ್ ಮಹಾಸಾಗರದ ಮಧ್ಯಭಾಗದಲ್ಲಿರುವ ಹವಾಯಿ ಪ್ರಾಂತ್ಯದ ದ್ವೀಪ ಪ್ರದೇಶ ಕಾಡ್ಗಿಚ್ಚಿಗೆ ಬೆಂದು ಹೋಗಿದೆ. ಈವರೆಗೆ ಕಿಚ್ಚಿನಲ್ಲಿ 89 ಜನರು ದಹನವಾಗಿದ್ದಾರೆ. ಇದು 100 ವರ್ಷಗಳಲ್ಲೇ ಅತಿ ಭೀಕರ ದುರಂತವಾಗಿದೆ. ಮೃತಪಟ್ಟವರಲ್ಲಿ ಈವರೆಗೆ ಇಬ್ಬರನ್ನು ಮಾತ್ರ ಗುರುತಿಸಲಾಗಿದೆ. ಇದು ಶತಮಾನದ ಅತಿ ಭೀಕರ ಅಗ್ನಿ ಅವಘಡ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಶತಮಾನಗಳಷ್ಟು ಹಳೆಯದಾದ ಲಹೈನಾ ಪಟ್ಟಣವನ್ನು ಕಾಡ್ಗಿಚ್ಚು ಸಂಪೂರ್ಣವಾಗಿ ಸುಟ್ಟು ಹಾಕಿದೆ. ನೂರಾರು ಮನೆಗಳು, ಸಮೃದ್ಧವಾದ ಕಾಡು ಸುಟ್ಟು ಕರಕಲಾಗಿದೆ. ಸ್ಮಶಾನದ ರೀತಿ ನಗರಗಳು ಭಾಸವಾಗುತ್ತಿರುವ ಭಯಾನಕ ದೃಶ್ಯಗಳು ಕರುಳು ಹಿಂಡುತ್ತಿವೆ.
ಹವಾಯಿ ದ್ವೀಪ ಎದುರಿಸಿದ ಅತಿ ಭೀಕರ ನೈಸರ್ಗಿಕ ವಿಕೋಪವಾಗಿದೆ. ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟವರನ್ನು ಗುರುತಿಸುವುದೂ ಸಾಧ್ಯವಾಗುತ್ತಿಲ್ಲ. ಪ್ರಕೃತಿ ರುದ್ರನರ್ತನಕ್ಕೆ ತಡೆ ಇಲ್ಲವಾಗಿದೆ. ಸರ್ಕಾರದ ಸದ್ಯದ ಗಮನ ಬದುಕುಳಿದವನ್ನು ಉಳಿಸಿಕೊಳ್ಳುವುದಾಗಿದೆ. ಅವರಿಗೆ ಸುರಕ್ಷಿತ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇದೊಂದು ವಿನಾಶಕಾರಿ ಕಾಡ್ಗಿಚ್ಚು. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಗವರ್ನರ್ ಜೋಶ್ ಗ್ರೀನ್ ಹೇಳಿದ್ದಾರೆ.
ಡಿಎನ್ಎ ಮೂಲಕ ಪತ್ತೆ: ಕಾಡ್ಗಿಚ್ಚಿನಲ್ಲಿ ಸುಟ್ಟು ಕರಕಲಾದ ಜನರನ್ನು ಗುರುತಿಸುವುದು ಅಸಾಧ್ಯವಾಗಿದೆ. ಇದಕ್ಕಾಗಿ ಡಿಎನ್ಎ ಟೆಸ್ಟ್ ನಡೆಸಲಾಗುವುದು. ಇಬ್ಬರನ್ನು ಮಾತ್ರ ಇಲ್ಲಿಯವರೆಗೆ ಪತ್ತೆ ಮಾಡಲಾಗಿದೆ. ಅವಶೇಷಗಳನ್ನು ಎತ್ತಿಕೊಂಡಲ್ಲಿ ಬೇರ್ಪಡುತ್ತಿವೆ. 89 ಮಂದಿ ಕಾಡ್ಗಿಚ್ಚಿಗೆ ದಹಿಸಿ ಹೋಗಿದ್ದಾರೆ. ಲೋಹದ ಮಾದರಿ ಜೀವಗಳನ್ನು ಬೆಂಕಿಯು ಕರಗಿಸಿದೆ ಎಂದು ಭೀಕರತೆಯ ಬಗ್ಗೆ ಪೊಲೀಸ್ ಮುಖ್ಯಸ್ಥ ಜಾನ್ ಪೆಲ್ಲೆಟಿಯರ್ ವಿವರಿಸಿದರು.
ಪಶ್ಚಿಮ ಮೌಯಿಯಲ್ಲಿ ಕನಿಷ್ಠ 2,200 ಮನೆಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಅದರಲ್ಲಿ 86% ವಸತಿ ಕಟ್ಟಡಗಳಾಗಿವೆ. ದ್ವೀಪದಾದ್ಯಂತ ಸುಮಾರು 6 ಬಿಲಿಯನ್ ಡಾಲರ್ ಹಾನಿ ಸಂಭವಿಸಿರುವ ಅಂದಾಜಿದೆ. ಇದರಿಂದ ಚೇತರಿಸಿಕೊಳ್ಳಲು ಅದೆಷ್ಟು ಸಮಯ ಬೇಕಾಗುತ್ತ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೌಯಿಯಲ್ಲಿ ಇನ್ನೂ ಎರಡು ಕಡೆ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಭಾಗದಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ದಕ್ಷಿಣ ಮೌಯಿಯ ಕಿಹೇ ಪ್ರದೇಶವನ್ನು ಅಪ್‌ಕಂಟ್ರಿ ಎಂದು ಕರೆಯಲಾಗುತ್ತದೆ. ಕಾಡ್ಗಿಚ್ಚು ಅಪ್‌ಕಂಟ್ರಿಯ 96% ವಸತಿ ಪ್ರದೇಶವು ಬೆಂಕಿಗೆ ದಹನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 70 ವೇಗದಲ್ಲಿ ಗಾಳಿ: ಗಾಳಿಯು ಗಂಟೆಗೆ 70 ಮೈಲು (ಗಂಟೆಗೆ 112 ಕಿಲೋಮೀಟರ್) ವೇಗದಲ್ಲಿ ಬೀಸುತ್ತಿದ್ದು ಕಾಡ್ಗಿಚ್ಚು ವ್ಯಾಪಿಸಲು ಕಾರಣವಾಗಿದೆ. ಇದರ ನೋಟ ಸಿನಿಮಾದಲ್ಲಿನ ಭಯಾನಕ ದೃಶ್ಯದಂತೆ ಕಾಣುತ್ತದೆ. ಗಾಳಿಯ ಆರ್ಭಟ ಬೆಂಕಿಯ ನರ್ತನಕ್ಕೆ ಇಂಬು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಾಹುತಗಳ ಸರಣಿ: 2018 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ 85 ಜನರು ಪ್ರಾಣ ಕಳೆದುಕೊಂಡಿದ್ದರು. ಇಡೀ ಪ್ಯಾರಡೈಸ್ ಪಟ್ಟಣವನ್ನು ಅದು ನಾಶಪಡಿಸಿತ್ತು. ಒಂದು ಶತಮಾನದ ಹಿಂದೆ ಅಂದರೆ, 1918 ರಲ್ಲಿ ಉತ್ತರ ಮಿನ್ನೇಸೋಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸಾವಿರಾರು ಮನೆ, ನೂರಾರು ಜನರನ್ನು ಬಲಿ ಪಡೆದಿತ್ತು.
ಇದನ್ನೂ ಓದಿ: ಇನ್ನೂ ಶಾಂತವಾಗದ ಅಗ್ನಿಯ ರೋಷಾವೇಷ.. ಹವಾಯಿ ಕಾಳ್ಗಿಚ್ಚಿಗೆ 67 ಜನ ಬಲಿ!!