ಕರಾಚಿ (ಪಾಕಿಸ್ತಾನ) : ತನ್ನ ದೇಶದ ಕರಾಚಿ ಬಂದರಿನ ಟರ್ಮಿನಲ್‌ಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಹಸ್ತಾಂತರಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಟರ್ಮಿನಲ್‌ಗಳನ್ನು ಹಸ್ತಾಂತರಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೊಂದಿಗೆ ಒಪ್ಪಂದ ಅಂತಿಮಗೊಳಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ಸಂಧಾನ ಸಮಿತಿಯೊಂದನ್ನು ಈಗಾಗಲೇ ರಚಿಸಿದೆ. ತುರ್ತು ನಿಧಿ ಸಂಗ್ರಹಿಸಲು ಕಳೆದ ವರ್ಷ ಜಾರಿಗೆ ತಂದ ಕಾನೂನಿನ ಅಡಿ ಇದು ಮೊದಲ ಅಂತರ್ ಸರ್ಕಾರಿ ವಹಿವಾಟು ಆಗಲಿದೆ.
ಹಣಕಾಸು ಸಚಿವ ಇಶಾಕ್ ದಾರ್ ಅವರು ಅಂತರ್ ಸರ್ಕಾರಿ ವಾಣಿಜ್ಯ ವಹಿವಾಟುಗಳ ಕ್ಯಾಬಿನೆಟ್ ಸಮಿತಿಯ ಸಭೆಯ ಅಧ್ಯಕ್ಷರಾಗಿದ್ದಾರೆ. ಸರ್ಕಾರದ ನಿರ್ಧಾರದ ಪ್ರಕಾರ ಕರಾಚಿ ಪೋರ್ಟ್ ಟ್ರಸ್ಟ್ (ಕೆಪಿಟಿ) ಮತ್ತು ಯುಎಇ ಸರ್ಕಾರದ ನಡುವೆ ವಾಣಿಜ್ಯ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಸಮಿತಿ ಸ್ಥಾಪಿಸಲು ಕ್ಯಾಬಿನೆಟ್ ಸಮಿತಿ ನಿರ್ಧರಿಸಿದೆ. ಕರಾಚಿ ಬಂದರು ಟರ್ಮಿನಲ್‌ಗಳನ್ನು ಹಸ್ತಾಂತರಿಸಲು ಯುಎಇ ಯ ನಾಮನಿರ್ದೇಶಿತ ಏಜೆನ್ಸಿಯೊಂದಿಗೆ ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದ ಅಡಿ ಕರಡು ಕಾರ್ಯಾಚರಣೆ, ನಿರ್ವಹಣೆ, ಹೂಡಿಕೆ ಮತ್ತು ಅಭಿವೃದ್ಧಿ ಒಪ್ಪಂದವನ್ನು ಅಂತಿಮಗೊಳಿಸಲು ಸಮಾಲೋಚನಾ ಸಮಿತಿಗೆ ಅನುಮತಿ ನೀಡಲಾಗಿದೆ.
ಚೌಕಟ್ಟಿನ ಒಪ್ಪಂದವನ್ನು ಅಂತಿಮಗೊಳಿಸಲು ರಚಿಸಲಾದ ಸಂಧಾನ ಸಮಿತಿಗೆ ಕಡಲ ವ್ಯವಹಾರಗಳ ಸಚಿವ ಫೈಸಲ್ ಸಬ್ಜ್ವಾರಿ ಮುಖ್ಯಸ್ಥರಾಗಿದ್ದಾರೆ. ಸಮಿತಿಯ ಸದಸ್ಯರಲ್ಲಿ ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿಗಳು, ಪ್ರಧಾನ ಮಂತ್ರಿಗಳ ವಿಶೇಷ ಸಹಾಯಕ ಜೆಹಾಂಜೆಬ್ ಖಾನ್, ಕರಾಚಿ ಪೋರ್ಟ್ ಟರ್ಮಿನಲ್ (ಕೆಪಿಟಿ) ಅಧ್ಯಕ್ಷರು ಮತ್ತು ಕೆಪಿಟಿಯ ಜನರಲ್ ಮ್ಯಾನೇಜರ್‌ಗಳು ಸೇರಿದ್ದಾರೆ.
ಅಬುಧಾಬಿ ಪೋರ್ಟ್ಸ್ ಗ್ರೂಪ್‌ನ ಅಂಗಸಂಸ್ಥೆಯಾದ ಅಬುಧಾಬಿ ಪೋರ್ಟ್ಸ್ (ಎಡಿಪಿ) ಗೆ ಟರ್ಮಿನಲ್‌ಗಳನ್ನು ಹಸ್ತಾಂತರಿಸುವ ಒಪ್ಪಂದ ಮಾಡಿಕೊಳ್ಳುವ ಗುರಿಯನ್ನು ಪಾಕಿಸ್ತಾನ ಹೊಂದಿದೆ. ಕಳೆದ ವರ್ಷ ಪಾಕಿಸ್ತಾನ ಇಂಟರ್‌ನ್ಯಾಷನಲ್ ಕಂಟೈನರ್ ಟರ್ಮಿನಲ್‌ಗಳ (ಪಿಐಸಿಟಿ) ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕರಾಚಿ ಬಂದರು ಟರ್ಮಿನಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಯುಎಇ ಸರ್ಕಾರ ಆಸಕ್ತಿ ತೋರಿಸಿತ್ತು.
ಅಬುಧಾಬಿ ಪೋರ್ಟ್ಸ್ ಕಂಪನಿಯು AD ಪೋರ್ಟ್ಸ್ ಗ್ರೂಪ್‌ನ ಭಾಗವಾಗಿದೆ. ಇದು ಯುಎಇ ಯಲ್ಲಿ 10 ಬಂದರುಗಳು ಮತ್ತು ಟರ್ಮಿನಲ್‌ಗಳನ್ನು ಹೊಂದಿದೆ ಅಥವಾ ನಿರ್ವಹಿಸುತ್ತದೆ. ಕಳೆದ ವರ್ಷ ಆಗಿನ ಮೈತ್ರಿ ಸರ್ಕಾರವು ಅಂತರ್ ಸರ್ಕಾರಿ ವಾಣಿಜ್ಯ ವಹಿವಾಟುಗಳ ಕಾಯಿದೆಯನ್ನು ಜಾರಿಗೊಳಿಸಿತು. ದೇಶದ ಸರ್ಕಾರಿ ಆಸ್ತಿಗಳನ್ನು ಮಾರುವ ಮೂಲಕ ತ್ವರಿತವಾಗಿ ಹಣಕಾಸು ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಕಾಯಿದೆ ಜಾರಿಗೊಳಿಸಲಾಗಿದೆ.
ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಸದ್ಯ ಮುಂದಿನ ಹಂತದ ಐಎಂಎಫ್ ಹಣಕಾಸು ನೆರವು ಸಿಗುವುದು ಬಹುತೇಕ ಸಾಧ್ಯವಿಲ್ಲ ಎನ್ನಲಾಗಿದೆ. ಹೀಗಾಗಿ ದೇಶದ ಆರ್ಥಿಕತೆಗೆ ಎಲ್ಲಿಂದಾದರೂ ಹಣ ಕ್ರೋಢೀಕರಿಸುವುದು ಅಗತ್ಯವಾಗಿದೆ. ಹೀಗಾಗಿ ಈಗ ಪಾಕಿಸ್ತಾನ ಸರ್ಕಾರ ತನ್ನ ಕರಾಚಿ ಬಂದರನ್ನೇ ಯುಎಇಗೆ ಹಸ್ತಾಂತರಿಸಲು ಮುಂದಾಗಿದೆ.
ಇದನ್ನೂ ಓದಿ : Footwear Norms: ಪಾದರಕ್ಷೆಗೂ ಬಂತು ಗುಣಮಟ್ಟದ ನಿಯಮ: ಜುಲೈ 1 ರಿಂದ ಜಾರಿ