ಕೈರೋ : ಯುದ್ಧಪೀಡಿತ ಗಾಜಾದಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ದಿನಗಳ ಮಾನವೀಯ ಕದನ ವಿರಾಮದ ಮಧ್ಯೆ ಶುಕ್ರವಾರದಿಂದ ಈಜಿಪ್ಟ್ನಿಂದ ನಿತ್ಯ ಸುಮಾರು 1,30,000 ಲೀಟರ್ ಡೀಸೆಲ್ ಮತ್ತು ನಾಲ್ಕು ಟ್ರಕ್ ಎಲ್ಪಿಜಿ ಅನಿಲ ಗಾಜಾವನ್ನು ಪ್ರವೇಶಿಸಲಿದೆ ಎಂದು ಈಜಿಪ್ಟ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಈಜಿಪ್ಟ್ನ ಸರ್ಕಾರಿ ಮಾಹಿತಿ ಇಲಾಖೆ ಅಧ್ಯಕ್ಷ ದಿಯಾ ರಶ್ವಾನ್, "ಈಜಿಪ್ಟ್ನಿಂದ ನಿತ್ಯ 1,30,000 ಲೀಟರ್ ಡೀಸೆಲ್ ಮತ್ತು ನಾಲ್ಕು ಟ್ರಕ್ ಅನಿಲ ಗಾಜಾ ಪಟ್ಟಿಗೆ ಪ್ರವೇಶಿಸಲಿದೆ ಮತ್ತು ಮಾನವೀಯ ನೆರವು ಈಜಿಪ್ಟ್ನಿಂದ ಗಾಜಾ ಪಟ್ಟಿಗೆ ಹರಿಯಲು ಪ್ರಾರಂಭಿಸುತ್ತದೆ" ಎಂದು ಹೇಳಿದರು.
ಅಕ್ಟೋಬರ್ 7 ರಂದು ಇಸ್ರೇಲ್ - ಹಮಾಸ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಆಹಾರ, ಔಷಧ ಮತ್ತು ನೀರನ್ನು ತುಂಬಿದ 200 ಟ್ರಕ್ಗಳು ನಿತ್ಯ ಗಾಜಾ ಪ್ರವೇಶಿಸಲಿವೆ ಎಂದು ಅವರು ಹೇಳಿದರು. "ಗಾಜಾದಲ್ಲಿ ಗಾಯಗೊಂಡ ಮಕ್ಕಳನ್ನು ಈಜಿಪ್ಟ್ ತನ್ನ ದೇಶದೊಳಗೆ ಬಿಟ್ಟುಕೊಳ್ಳಲಿದೆ ಮತ್ತು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದನ್ನು ಮುಂದುವರಿಸುತ್ತದೆ. ಜೊತೆಗೆ ಗಾಜಾ ಪಟ್ಟಿಯಲ್ಲಿ ಬಂಧನಕ್ಕೊಳಗಾದ ವಿದೇಶಿಯರು ಮತ್ತು ದ್ವಿಪೌರತ್ವ ಹೊಂದಿದ ಪ್ರಜೆಗಳು ದೇಶದೊಳಗೆ ಬರಲು ಅವಕಾಶ ನೀಡಲಾಗುತ್ತದೆ ಮತ್ತು ಅವರು ಪ್ರಜೆಗಳಾಗಿರುವ ದೇಶಗಳಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತದೆ" ಎಂದು ಅಧಿಕಾರಿ ಹೇಳಿದರು.
ಸಂಘರ್ಷ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ರಾಫಾ ಗಡಿ ಮೂಲಕ ಗಾಜಾಗೆ ಹೋಗಲು ಬಯಸುವ ಪ್ಯಾಲೆಸ್ಟೈನಿಯರಿಗೆ ಅವಕಾಶ ನೀಡಲಿದೆ ಎಂದು ಅವರು ಹೇಳಿದರು. ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಂಡ ಕದನ ವಿರಾಮ ಒಪ್ಪಂದವು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಗಾಜಾ ಸ್ಥಳೀಯ ಕಾಲಮಾನದ ಪ್ರಕಾರ ಜಾರಿಗೆ ಬಂದಿದೆ.
ಕತಾರ್, ಈಜಿಪ್ಟ್ ಮತ್ತು ಯುಎಸ್ ಮಧ್ಯಸ್ಥಿಕೆಯಲ್ಲಿ ಬುಧವಾರದ ಒಪ್ಪಂದದ ಪ್ರಕಾರ, ಒಪ್ಪಂದದ ಮೊದಲ ಹಂತವಾಗಿ ಶುಕ್ರವಾರ ಸಂಜೆ 4 ಗಂಟೆಗೆ ಸುಮಾರು 13 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. 2007ರಿಂದ ಗಾಜಾವನ್ನು ಆಳುತ್ತಿರುವ ಹಮಾಸ್, ಒತ್ತೆಯಾಳುಗಳನ್ನು ಈಜಿಪ್ಟ್ ಗೆ ಹಸ್ತಾಂತರಿಸಲಿದೆ. ಪ್ರತಿಯಾಗಿ, ಇಸ್ರೇಲ್ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ಪ್ಯಾಲೆಸ್ಟೈನಿಯರನ್ನು ಇಸ್ರೇಲಿ ಜೈಲುಗಳಿಂದ ಬಿಡುಗಡೆ ಮಾಡಲಿದೆ. ನಾಲ್ಕು ದಿನಗಳ ವಿರಾಮದ ಭಾಗವಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ತನ್ನ ಎಲ್ಲ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ನೆದರ್ಲ್ಯಾಂಡ್ಸ್ ಚುನಾವಣೆ; ಇಸ್ಲಾಂ ವಿರೋಧಿ ಮುಖಂಡ ಗೀರ್ಟ್ ವೈಲ್ಡರ್ಸ್ ಪಕ್ಷಕ್ಕೆ ಬಹುಮತ ಸಾಧ್ಯತೆ