ಲಂಡನ್: ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಪ್ರಮುಖ ನಾಯಕ ಮುಹಮ್ಮದ್ ಖಾಸಿಮ್ ಸವಾಲ್ಹಾ ಲಂಡನ್ನಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯ ಬರ್ನೆಟ್ ಕೌನ್ಸಿಲ್ನಿಂದ ಖರೀದಿಸಲಾದ ಫ್ಲ್ಯಾಟ್ನಲ್ಲಿ ಆತ ನೆಲೆಸಿದ್ದಾನೆ ಎಂದು ದಿ ಸಂಡೇ ಟೈಮ್ಸ್‌ನಲ್ಲಿ ಪ್ರಕಟವಾದ ಮುಖಪುಟದ ಅಂಕಣದಲ್ಲಿ ಬಹಿರಂಗಪಡಿಸಲಾಗಿದೆ.
62 ವರ್ಷದ ಸವಾಲ್ಹಾ 1990ರ ದಶಕದಲ್ಲಿ ಪ್ಯಾಲೆಸ್ಟೈನ್ ಆಡಳಿತದ ಪ್ರದೇಶವಾದ ಗಾಜಾದಿಂದ ಬ್ರಿಟನ್ಗೆ ಪಲಾಯನ ಮಾಡಿದ್ದ. ನಂತರ ಆತ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾನೆ. ಬಹುಶಃ 2000 ರ ದಶಕದ ಆರಂಭದಲ್ಲಿ ಆತನಿಗೆ ಬ್ರಿಟಿಷ್ ಪಾಸ್ಪೋರ್ಟ್ ನೀಡಲಾಗಿದೆ. ಈತನನ್ನು ಹಮಾಸ್‌ನ ಮಾಸ್ಟರ್ಮೈಂಡ್ ಎಂದೂ ಕರೆಯಲಾಗುತ್ತದೆ.
ಇಸ್ರೇಲ್ನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಅಕ್ರಮವಾಗಿ ಹಣಕಾಸು ಒದಗಿಸುತ್ತಿದ್ದಾನೆ ಎಂದು 2004 ರಲ್ಲಿ ಯುನೈಟೆಡ್ ಸ್ಟೇಟ್ಸ್ ಜಸ್ಟೀಸ್ ಡಿಪಾರ್ಟ್ಮೆಂಟ್ ಈತನ ವಿರುದ್ಧ ಪ್ರಕರಣ ದಾಖಲಿಸಿತ್ತು. ಲಂಡನ್ಗೆ ಬಂದ ನಂತರವೂ ಸವಾಲ್ಹಾ ಹಮಾಸ್ಗಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಹಮಾಸ್‌ನ ರಾಜಕೀಯ ಮತ್ತು ಮಿಲಿಟರಿ ಕಾರ್ಯತಂತ್ರದ ಬಹುಭಾಗವನ್ನು ಈತನೇ ಮಾಸ್ಟರ್ ಮೈಂಡ್ ಮಾಡಿದ್ದ ಎಂದು 2006ರಲ್ಲಿ ಬಿಬಿಸಿಯಲ್ಲಿ ಬಿತ್ತರಗೊಂಡ ಕಾರ್ಯಕ್ರಮವೊಂದರಲ್ಲಿ ಹೇಳಲಾಗಿದೆ. ಬ್ರಿಟನ್ನ ಆಂತರಿಕ ಗುಪ್ತಚರ ಸಂಸ್ಥೆಯಾದ ಎಂಐ 5 ಗೆ ಸವಾಲ್ಹಾ ಬಗ್ಗೆ ತಿಳಿದಿದ್ದರೂ ಅವರು ಸವಾಲ್ಹಾಗೆ ಯುಕೆಯಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಲು ಬಿಟ್ಟಿದ್ದಾರೆ ಎಂದು ಅದು ಆರೋಪಿಸಿದೆ.
2009 ರಲ್ಲಿ, ಸವಾಲ್ಹಾ ಝಿಯೋನಿಸ್ಟ್ ಯಹೂದಿಗಳನ್ನು ಸೋಲಿಸಿದ್ದಕ್ಕಾಗಿ ಅಲ್ಲಾಹನನ್ನು ಶ್ಲಾಘಿಸುವ ಘೋಷಣೆಗೆ ಸಹಿ ಹಾಕಿದ್ದ. ಇಸ್ರೇಲಿ ಅಧಿಕಾರಿಗಳು ಈತನನ್ನು ಹಮಾಸ್ಗೆ ಸೇರಿದವನು ಎಂದು ಗುರುತಿಸಿದ್ದು, ಇಸ್ರೇಲ್ಗೆ ಬಂದರೆ ಬಂಧಿಸಬಹುದು. ಆದರೆ ಆತ ಇಸ್ರೇಲ್ಗೆ ಬರುವ ಸಾಧ್ಯತೆಯೇ ಇಲ್ಲ. ಸವಾಲ್ಹಾ 2013 ಮತ್ತು 2017ರ ನಡುವೆ ಹಮಾಸ್ ಪಾಲಿಟ್ ಬ್ಯೂರೋ ಸದಸ್ಯನಾಗಿದ್ದ ಎಂದು ಹೇಳಲಾಗಿದೆ.
ಸವಾಲ್ಹಾ 2017ರಲ್ಲಿ ಹಮಾಸ್‌ನ ರಷ್ಯಾ ನಿಯೋಗದೊಂದಿಗೆ ಕೆಲಸ ಮಾಡಲು ಆರಂಭಿಸಿದಾಗ ಆತ ಹಮಾಸ್ನೊಂದಿಗೆ ತನ್ನ ಸಂಬಂಧ ಮುಂದುವರಿಸಿದ್ದ ಎಂಬುದು ಗೊತ್ತಾಗಿತ್ತು ಎಂದು ಸಂಡೇ ಟೈಮ್ಸ್ ವರದಿ ಹೇಳಿದೆ. ರಷ್ಯಾದ ಮುಸ್ಲಿಂ ಸಂಘಟನೆಯಾದ ಕೌನ್ಸಿಲ್ ಆಫ್ ಮುಫ್ತಿಸ್ ಈತನನ್ನು ಹಮಾಸ್‌ನ ವಿದೇಶಾಂಗ ವಿಭಾಗದ ಮುಖ್ಯಸ್ಥನೆಂದು ತನ್ನ ವೆಬ್ಸೈಟ್ನಲ್ಲಿ ಬರೆದುಕೊಂಡಿದೆ. ಅಲ್ಲದೆ ರಷ್ಯಾದ ಉಪ ವಿದೇಶಾಂಗ ಮಂತ್ರಿ ಮಿಖೈಲ್ ಬೊಡ್ಗಾನೊವ್ ಅವರೊಂದಿಗೆ ಈತ ಕಾಣಿಸಿಕೊಂಡಿರುವ ಚಿತ್ರವೊಂದನ್ನು ಅದು ವೆಬ್ಸೈಟ್ನಲ್ಲಿ ಹಾಕಿಕೊಂಡಿದೆ.
ಇದನ್ನೂ ಓದಿ: ಭಾರತದೊಂದಿಗಿನ ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಂಡ ಚೀನಾ: ಪೆಂಟಗನ್ ವರದಿ