ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡಿಸಾಂಟಿಸ್ ಅವರು 2024 ರ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅನುಮೋದಿಸಿದರೆ ಅದು ದೇಶಕ್ಕೆ ಆರೋಗ್ಯಕರ ಎಂದು ಭಾರತೀಯ - ಅಮೆರಿಕನ್ ವಿವೇಕ್ ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ವಿವೇಕ್ ರಾಮಸ್ವಾಮಿ ಕೂಡ ಈ ಮುನ್ನ ಅಧ್ಯಕ್ಷೀಯ ಹುದ್ದೆಯ ರೇಸ್ನಲ್ಲಿದ್ದರು. ಆದರೆ ಇತ್ತೀಚೆಗಷ್ಟೇ ಅವರು ಟ್ರಂಪ್ಗೆ ಬೆಂಬಲಿಸಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಮಂಗಳವಾರ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಯೋಟೆಕ್ ಉದ್ಯಮಿ ವಿವೇಕ್, ಅಯೋವಾದ ರಿಪಬ್ಲಿಕನ್ ಮತದಾರರು ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗಬೇಕು ಎಂದು ಬಯಸುತ್ತಾರೆ ಎಂದು ಹೇಳಿದರು. "ರಾನ್ ಡೆಸಾಂಟಿಸ್ ಮತ್ತು ನಿಕ್ಕಿ ಹ್ಯಾಲೆ ಈ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಅವರನ್ನು ನಾಮ ನಿರ್ದೇಶನ ಮಾಡುವುದಲ್ಲದೇ, ಅಧ್ಯಕ್ಷೀಯ ಚುನಾವಣೆಯಿಂದ ದೂರ ಸರಿಯುವ ಮೂಲಕ ಈ ದೇಶ ಮತ್ತು ಈ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು 38 ವರ್ಷದ ವಿವೇಕ್ ರಾಮಸ್ವಾಮಿ ಹೇಳಿದರು. "ವಿಶೇಷವಾಗಿ ರಾನ್ ಡಿಸಾಂಟಿಸ್ ಈ ದೇಶವನ್ನು ಮುನ್ನಡೆಸುವ ಈ ದೇಶದ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ" ಎಂದು ಅವರು ಹೇಳಿದರು.
90 ಕ್ಕೂ ಹೆಚ್ಚು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ, ಎರಡು ಬಾರಿ ವಾಗ್ದಂಡನೆಗೊಳಗಾದ ಮಾಜಿ ಅಧ್ಯಕ್ಷ ಟ್ರಂಪ್ ಅಯೋವಾದಲ್ಲಿ ವಿಜಯಶಾಲಿಯಾಗಿದ್ದಾರೆ ಮತ್ತು ರಿಪಬ್ಲಿಕನ್ ನಾಮನಿರ್ದೇಶನದ ಮುಂಚೂಣಿಯಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಕಾಕಸ್ನಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದ ಡೆಸಾಂಟಿಸ್ ಮತ್ತು ಹ್ಯಾಲೆ, ಪ್ರಾಥಮಿಕ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಹಿಂದಿಕ್ಕುವ ಭರವಸೆ ಹೊಂದಿದ್ದಾರೆ. ಆದರೆ, ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಇಬ್ಬರು ಪ್ರತಿಸ್ಪರ್ಧಿಗಳ ನಡುವಿನ ಅಂತರವು ತುಂಬಾ ದೊಡ್ಡದಿದೆ.
ಅಯೋವಾ ಕಾಕಸ್ ಗೆದ್ದ ನಂತರ, ಟ್ರಂಪ್ ನ್ಯೂ ಹ್ಯಾಂಪ್ಶೈರ್ನ ಅಟ್ಕಿನ್ಸನ್ನಲ್ಲಿ ರಾಮಸ್ವಾಮಿ ಅವರೊಂದಿಗೆ ಮೊದಲ ಬಾರಿಗೆ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಎಂಟು ನಿಮಿಷಗಳ ಕಾಲ ಕ್ರಾಂತಿಕಾರಿ ಭಾಷಣ ಮಾಡಿದರು.
ತಮ್ಮನ್ನು ಬೆಂಬಲಿಸಿ ಹೇಳಿಕೆ ನೀಡಿದ ವಿವೇಕ್ ರಾಮಸ್ವಾಮಿ ಅವರನ್ನು ಅಭಿನಂದಿಸಿದ ಟ್ರಂಪ್, ರಾಮಸ್ವಾಮಿ ಅವರನ್ನು ಬಹಳ ವಿಶೇಷ ವ್ಯಕ್ತಿ ಎಂದು ಕರೆದರು. ಅಲ್ಲದೇ ರಾಮಸ್ವಾಮಿ ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ ಮತ್ತು ಅವರು ನಮ್ಮೊಂದಿಗೆ ದೀರ್ಘಕಾಲ ಕೆಲಸ ಮಾಡಲಿದ್ದಾರೆ ಎಂದು ತಮ್ಮ ಬೆಂಬಲಿಗರಿಗೆ ಇದೇ ವೇಳೆ ಟ್ರಂಪ್ ಭರವಸೆ ನೀಡಿದರು.
ಇದನ್ನೂ ಓದಿ : ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ವಿಶ್ವಸಂಸ್ಥೆಗೆ ಬಲೂಚ್ ಹೋರಾಟಗಾರರ ದೂರು