ಪ್ರಾಗ್ (ಜೆಕ್ ಗಣರಾಜ್ಯ): ಜೆಕ್ ಗಣರಾಜ್ಯದ ಪ್ರಾಗ್ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯೊಬ್ಬ ಗುರುವಾರ ಗುಂಡು ದಾಳಿ ನಡೆಸಿದ್ದಾನೆ. ಈ ದುರ್ಘಟನೆಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾರ್ಲ್ಸ್ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಕಟ್ಟಡದಲ್ಲಿ ರಕ್ತಪಾತ ನಡೆದಿದ್ದು, ಶೂಟರ್ ವಿದ್ಯಾರ್ಥಿಯಾಗಿದ್ದಾನೆ. ಈ ಬಂದೂಕುಧಾರಿಯೂ ಸಾವನ್ನಪ್ಪಿದ್ದಾನೆ. ಜೊತೆಗೆ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪ್ರಾಗ್ ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ಹೇಳಿದ್ದಾರೆ. ಆದ್ರೆ, ಆರೋಪಿಯ ಹೆಸರನ್ನು ಬಿಡುಗಡೆ ಪೊಲೀಸರು ಇನ್ನೂ ಮಾಡಿಲ್ಲ.
ಜೆಕ್ ಆಂತರಿಕ ಸಚಿವ ವಿಟ್ ರಕುಸನ್ ಹೇಳಿದ್ದೇನು?: ''ಪೊಲೀಸರು ಮೃತರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಜನ್ ಪಲಾಚ್ ಸ್ಕ್ವೇರ್‌ನಲ್ಲಿರುವ ವ್ಲ್ತಾವಾ ನದಿಯ ಬಳಿ ಇರುವ ಕಟ್ಟಡದಲ್ಲಿ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಸಿರುವ ವಿದ್ಯಾರ್ಥಿಯ ಬಗ್ಗೆ ತನಿಖಾಧಿಕಾರಿಗಳು, ಯಾವುದೇ ಉಗ್ರಗಾಮಿ ಸಿದ್ಧಾಂತ ಅಥವಾ ಗುಂಪುಗಳ ಜೊತೆಗೆ ನಂಟು ಹೊಂದಿರುವ ಕುರಿತು ಅನುಮಾನ ಮೂಡಿಲ್ಲ'' ಎಂದು ಜೆಕ್ ಆಂತರಿಕ ಸಚಿವ ವಿಟ್ ರಕುಸನ್ ಹೇಳಿದ್ದಾರೆ.
ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ಮಾಹಿತಿ: ಈ ಬಂದೂಕುಧಾರಿ ತನ್ನ ತಂದೆಯನ್ನು ಪ್ರಾಗ್ ಪಶ್ಚಿಮ ಭಾಗದಲ್ಲಿರುವ ಹೋಸ್ಟೌನ್‌ನಲ್ಲಿ ಗುರುವಾರ ಮುಂಜಾನೆ ಕೊಂದಿದ್ದಾನೆ. ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿ ನಂತರ ತಾನು ಮೃತಪಟ್ಟಿದ್ದಾನೆ. ಆರೋಪಿಯ ಮನೆಯ ಶೋಧ ಕಾರ್ಯ ನಡೆಸಿದ ಆಧಾರದ ಮೇಲೆ, ಬಂದೂಕುಧಾರಿಯು ಇನ್ನೊಬ್ಬ ವ್ಯಕ್ತಿ ಮತ್ತು ಆತನ 2 ತಿಂಗಳ ಮಗುವನ್ನು ಡಿಸೆಂಬರ್ 15 ರಂದು ಪ್ರಾಗ್ನಲ್ಲಿ ಕೊಂದಿರುವ ಶಂಕೆ ಇದೆ ಎಂದು ಪ್ರಾಗ್ ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ತಿಳಿಸಿದರು.
ಶೂಟರ್ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಯಿಲ್ಲ. ವಿಶ್ವವಿದ್ಯಾಲಯದಲ್ಲಿ ಈತನನ್ನು ಉತ್ತಮ ವಿದ್ಯಾರ್ಥಿ ಎಂದು ಹೇಳಲಾಗುತ್ತದೆ. ಬಂದೂಕುಧಾರಿಯು ತನಗೆ ತಾನೇ ಗುಂಡಿ ಹಾರಿಕೊಂಡಿದ್ದಾನೆಯೇ ಅಥವಾ ಅಧಿಕಾರಿಗಳ ಗುಂಡೇಟಿನಿಂದ ಸಾವನ್ನಿಪ್ಪಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವೊಂಡ್ರಾಸೆಕ್ ಮಾಹಿತಿ ನೀಡಿದರು.
ತಕ್ಷಣವೇ ಜಾರಿಗೆ ಬರುವಂತೆ ವಿಶ್ವವಿದ್ಯಾನಿಲಯದ ಕಟ್ಟಡಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ನಮ್ಮ ವಿಶ್ವವಿದ್ಯಾನಿಲಯದ ಜನರ ಸಾವಿಗೆ ನಾವು ಶೋಕ ವ್ಯಕ್ತಪಡಿಸುತ್ತೇವೆ. ಮೃತರ ಸಂಬಂಧಿಕರಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಚಾರ್ಲ್ಸ್ ವಿಶ್ವವಿದ್ಯಾಲಯದ ಅಧಿಕಾರಿಗಳು ಸಂತಾಪ ಸೂಚಿಸಿದರು.
ಶೂಟಿಂಗ್ ನಡೆದ ಕಟ್ಟಡವು ಪ್ರಾಗ್ನ ಓಲ್ಡ್ ಟೌನ್‌ನಲ್ಲಿರುವ ಜನನಿಬಿಡ ಪ್ರವಾಸಿ ಪ್ರದೇಶವಾದ ಜನ್ ಪಲಾಚ್ ಸ್ಕ್ವೇರ್‌ನಲ್ಲಿರುವ ವಲ್ತಾವಾ ನದಿಯ ಸಮೀಪದಲ್ಲಿದೆ. ಸುಂದರವಾದ ಓಲ್ಡ್ ಟೌನ್ ಸ್ಕ್ವೇರ್ ಭೀಕರ ಘಟನೆಯಿಂದ ನಡುಗಿ ಹೋಯಿತು. ಈ ಕಟ್ಟಡವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಇಲ್ಲಿನ ಕ್ರಿಸ್ಮಸ್ ಮಾರುಕಟ್ಟೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: ಹಮಾಸ್ ದಾಳಿ, ಇಸ್ರೇಲ್ ಯುದ್ಧ-ಸಾವಿರಾರು ಸಾವು; ಕರಾಳ ಘಟನೆಗಳಿಗೆ ಸಾಕ್ಷಿಯಾದ 2023ರ ವರ್ಷ