ಇಸ್ಲಾಮಾಬಾದ್ : ತಮ್ಮ ಸ್ಥಾನಕ್ಕಿರುವ ಅಧಿಕಾರ ಬಲದಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಯಾವುದೇ ಒಂದು ವಿಚಾರದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರವನ್ನು ಕಿತ್ತೆಸೆಯುವ ವಿವಾದಾತ್ಮಕ ಕಾನೂನಿಗೆ ಪಾಕಿಸ್ತಾನದ ಫೆಡರಲ್ ಸಂಪುಟ ಒಪ್ಪಿಗೆ ನೀಡಿದೆ. ಈಗ ಈ ಪ್ರಸ್ತಾವಿತ ಕಾನೂನನ್ನು ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಆಗಿರುವ ರಾಜಾ ಪರ್ವೇಜ್ ಅಶ್ರಫ್ ಅವರು ನ್ಯಾಯ ಮತ್ತು ಕಾನೂನು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿಯಮಗಳಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳು ಕಾನೂನು ಮತ್ತು ರಾಜಕೀಯ ವಲಯಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ ಮತ್ತು ಹೊಸ ಮಸೂದೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ "ಸುಪ್ರೀಂ ಕೋರ್ಟ್ (ಅಭ್ಯಾಸ ಮತ್ತು ಕಾರ್ಯವಿಧಾನ) ಕಾಯಿದೆ, 2023" ಎಂಬ ಮಸೂದೆಯನ್ನು ಅಂಗೀಕರಿಸಲಾಗಿತ್ತು ಮತ್ತು ಅಂಗೀಕಾರವಾದ ತಕ್ಷಣ ಇದನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಯಿತು. ಅಂದಿನ ದಿನನಿತ್ಯದ ಮೂಲ ಕಲಾಪ ಪಟ್ಟಿಯಲ್ಲಿ ಮಸೂದೆಯ ವಿಚಾರ ಇರದ ಕಾರಣ ಪೂರಕ ಅಜೆಂಡಾ ಮೂಲಕ ನ್ಯಾಷನಲ್ ಅಸೆಂಬ್ಲಿಯಲ್ಲಿ ಮಸೂದೆ ಮಂಡಿಸಲಾಗಿತ್ತು.
ಬುಧವಾರ ನಡೆಯಲಿರುವ ತನ್ನ ಸಭೆಯಲ್ಲಿ ಸ್ಥಾಯಿ ಸಮಿತಿಯು ಮಸೂದೆಯನ್ನು ಅಂಗೀಕರಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ. ಈ ಮುನ್ನ ಆರ್ಟಿಕಲ್ 184 (3) ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಧಿಕಾರ ಬಳಸಿ ನಿರ್ದಿಷ್ಟ ವಿಷಯದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರವಿತ್ತು. ಈಗ ಹೊಸ ಮಸೂದೆಯ ಪ್ರಕಾರ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಈ ರೀತಿಯ ಅಧಿಕಾರವನ್ನು ಹೊಂದಲಿದೆ.
ಮಾಜಿ ಪ್ರಧಾನಿ ಇಮ್ರಾನ್ ಜೊತೆ ಮಾತುಕತೆ ಇಲ್ಲ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ತಪ್ಪನ್ನು ಒಪ್ಪಿಕೊಂಡರೆ ಮತ್ತು ತಾನು ಮಾಡಿದ ತಪ್ಪಿಗಾಗಿ ದೇಶದ ಜನರಲ್ಲಿ ಕ್ಷಮೆಯಾಚಿಸಿದರೆ ಮಾತ್ರ ಪಾಕಿಸ್ತಾನ ಸರ್ಕಾರ ಮತ್ತು ಅವರ ನಡುವೆ ಮಾತುಕತೆ ನಡೆಯಲು ಸಾಧ್ಯ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಮಂಗಳವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆವೇಶಭರಿತ ಭಾಷಣದಲ್ಲಿ ಹೇಳಿದರು. ಇಮ್ರಾನ್ ಖಾನ್ ಅವರನ್ನು ‘ವಂಚಕ’ ಎಂದು ಬಣ್ಣಿಸಿದ ಅವರು, ದೇಶವನ್ನು ಲೂಟಿ ಮಾಡಿದವರು, ನ್ಯಾಯಾಂಗದ ಮೇಲೆ ದಾಳಿ ಮಾಡಿದವರು ಮತ್ತು ಸಂವಿಧಾನ ಮತ್ತು ನ್ಯಾಯದ ಮೇಲೆ ನಂಬಿಕೆಯಿಲ್ಲದವರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದರು.
ಕೋವಿಡ್ -19 ಸಾಂಕ್ರಾಮಿಕ ಮತ್ತು ಭಯೋತ್ಪಾದನೆ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಮಾತುಕತೆಗಾಗಿ ಸರ್ಕಾರದ ಆಹ್ವಾನಗಳನ್ನು ನಿರಂತರವಾಗಿ ತಿರಸ್ಕರಿಸಿದ ವ್ಯಕ್ತಿಯೊಂದಿಗೆ ಚರ್ಚೆ ನಡೆಸಲಾಗುವುದಿಲ್ಲ ಎಂದು ಷರೀಫ್ ಪ್ರತಿಪಾದಿಸುತ್ತಿದ್ದಾರೆ. ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಹಣಕಾಸು ನಿಧಿ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಅವರ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಸಾಲವು ಶೇ 70 ರಷ್ಟು ರಷ್ಟು ಹೆಚ್ಚಾಗಿದೆ. ಅವರ ಅವಧಿಯಲ್ಲಿ ಒಂದೇ ಒಂದು ಯೋಜನೆಯನ್ನು ಪ್ರಾರಂಭಿಸಲಿಲ್ಲ ಎಂದು ಎಂದು ಪ್ರಧಾನಿ ಷರೀಫ್ ಆರೋಪಿಸಿದರು.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಮರುಕಳಿಸುವ ಸಾಧ್ಯತೆ: ಜಮಾತ್-ಎ-ಇಸ್ಲಾಮಿ ಎಚ್ಚರಿಕೆ