ಜೆರುಸಲೇಂ : ಗಾಜಾ ಪಟ್ಟಿಗೆ ಇಂಧನ ತೀವ್ರ ಅಗತ್ಯವಾಗಿರುವುದು ನಿಜವಾದರೂ ಅಲ್ಲಿಗೆ ಕಳುಹಿಸುವ ಇಂಧನವನ್ನು ಹಮಾಸ್ ಕದ್ದು ಅದನ್ನು ತನ್ನ ಮಿಲಿಟರಿ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತದೆ ಎಂದು ಆರೋಪಿಸಿರುವ ಇಸ್ರೇಲ್, ಯಾವುದೇ ಕಾರಣಕ್ಕೂ ಗಾಜಾ ಪಟ್ಟಿಗೆ ಇಂಧನ ಪೂರೈಕೆಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ.
ಒತ್ತೆಯಾಳುಗಳ ಬಿಡುಗಡೆಗೆ ಬದಲಾಗಿ ಇಸ್ರೇಲ್ ಗಾಜಾಕ್ಕೆ ಇಂಧನ ಪೂರೈಕೆಗೆ ಅವಕಾಶ ನೀಡಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಮಂಗಳವಾರ ತಡರಾತ್ರಿ ಉತ್ತರಿಸಿದ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ವಿಶ್ವಸಂಸ್ಥೆಯ ಪರಿಹಾರ ಕಾರ್ಯಾಚರಣೆ ಏಜೆನ್ಸಿಗೆ (UN Relief and Works Agency -UNRWA) ಕಳುಹಿಸಲಾದ ಇಂಧನವನ್ನು ಹಮಾಸ್ ಕದ್ದಿದೆ ಎಂದು ಹೇಳಿದರು.
"ಸದ್ಯ ಹಮಾಸ್ಗೆ ಇಂಧನದ ತೀವ್ರ ಅವಶ್ಯಕತೆಯಿದೆ. ಆದರೆ ಹಮಾಸ್ ಯುಎನ್ಆರ್ಡಬ್ಲ್ಯೂಎ ಯಿಂದ ಇಂಧನವನ್ನು ಕದ್ದ ನಂತರ ನಾವೀಗ ಇಂಧನದ ಅಗತ್ಯತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆಸ್ಪತ್ರೆಗಳಿಗೆ ಇಂಧನದ ಅಗತ್ಯ ಇದ್ದರೆ ಅವರು ಅದನ್ನು ಹಮಾಸ್ಗೆ ಕೇಳಲಿ" ಎಂದು ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ನುಡಿದರು.
ಗಾಜಾ ಪಟ್ಟಿಗೆ ಇಂಧನ ಅಗತ್ಯತೆಯ ಬಗ್ಗೆ ಎಕ್ಸ್ನಲ್ಲಿ ಮಂಗಳವಾರ ಪೋಸ್ಟ್ ಮಾಡಿದ್ದ ಯುಎನ್ಆರ್ಡಬ್ಲ್ಯೂಎ, "ನಮಗೆ ತುರ್ತಾಗಿ ಇಂಧನ ಸಿಗದಿದ್ದರೆ, ಬುಧವಾರ ರಾತ್ರಿಯ ಹೊತ್ತಿಗೆ ಗಾಜಾ ಪಟ್ಟಿಯಲ್ಲಿನ ನಮ್ಮ ಎಲ್ಲ ಪರಿಹಾರ ಕಾರ್ಯಾಚರಣೆಗಳನ್ನು ನಾವು ನಿಲ್ಲಿಸುವುದು ಅನಿವಾರ್ಯವಾಗಲಿದೆ" ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಐಡಿಎಫ್, ಗಾಜಾದೊಳಗಿನ ಇಂಧನ ಟ್ಯಾಂಕ್ಗಳನ್ನು ತೋರಿಸುವ ಉಪಗ್ರಹ ಫೋಟೋ ಪೋಸ್ಟ್ ಮಾಡಿ, "ಈ ಇಂಧನ ಟ್ಯಾಂಕ್ಗಳು ಗಾಜಾದೊಳಗೇ ಇವೆ. 5 ಲಕ್ಷ ಲೀಟರ್ಗೂ ಹೆಚ್ಚು ಇಂಧನ ಅಲ್ಲಿದೆ. ನಿಮಗೂ ಅದರಲ್ಲಿ ಸ್ವಲ್ಪ ಕೊಡುತ್ತಾರಾ ಎಂದು ಹಮಾಸ್ಗೆ ಕೇಳಿ ನೋಡಿ" ಎಂದು ಹೇಳಿದೆ.
ಗಾಜಾ ಪಟ್ಟಿಗೆ ತಕ್ಷಣ ಇಂಧನ ಪೂರೈಕೆ ಆರಂಭವಾಗದಿದ್ದರೆ ಅಲ್ಲಿನ ಪರಿಸ್ಥಿತಿ ದುರಂತಮಯವಾಗಲಿದೆ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು, ಆಸ್ಪತ್ರೆಗಳು ತೆರೆದು ಜೀವಗಳನ್ನು ಉಳಿಸಲು ಇಂಧನದ ಅಗತ್ಯವಿದೆ ಎಂದು ಎಂದು ಯುಎನ್ಆರ್ಡಬ್ಲ್ಯೂಎ ಹೇಳಿದೆ. ದಾಳಿಯಿಂದ ಹಾನಿಗೊಳಗಾಗಿ ಅಥವಾ ಇಂಧನದ ಕೊರತೆಯಿಂದಾಗಿ ಗಾಜಾದ ಮೂರನೇ ಒಂದು ಭಾಗದಷ್ಟು ಆಸ್ಪತ್ರೆಗಳು ಮತ್ತು ಸುಮಾರು ಮೂರನೇ ಎರಡರಷ್ಟು ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳು ಮುಚ್ಚಲ್ಪಟ್ಟಿವೆ ಎಂದು ಇತರ ಯುಎನ್ ಏಜೆನ್ಸಿಗಳು ಅಂದಾಜಿಸಿವೆ ಎಂದು ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ : ಏನಿದು ಐರನ್ ಡೋಮ್? ಇಸ್ರೇಲ್ನ ರಕ್ಷಣೆಗೆ ಇದೆಷ್ಟು ಸಮರ್ಥ?