ಕೊಲಂಬೊ: ದುಬೈ ವಿಮಾನ ಹತ್ತಲು ಯತ್ನಿಸುತ್ತಿದ್ದ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರ ಕಿರಿಯ ಸಹೋದರ ಮತ್ತು ದೇಶದ ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಅವರನ್ನು ವಿಮಾನ ಹತ್ತದಂತೆ ಸೋಮವಾರ ಸಂಜೆ ತಡೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಬಸಿಲ್ ಶ್ರೀಲಂಕಾ ತೊರೆಯಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇತರ ಪ್ರಯಾಣಿಕರು ಭಾರಿ ಪ್ರತಿಭಟನೆ ನಡೆಸಿದ್ದರಿಂದ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಬಸಿಲ್ ಅವರಿಗೆ ದೇಶ ಬಿಡಲು ಅನುಮತಿ ನಿರಾಕರಿಸಿದ್ದಾರೆ ಮಾಧ್ಯಮಗಳ ವರದಿ ತಿಳಿಸಿವೆ.
ವಲಸೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ನಂತರ, ಅನಿವಾರ್ಯವಾಗಿ ಬಸಿಲ್ ವಿಮಾನ ನಿಲ್ದಾಣದಿಂದ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.ಶ್ರೀಲಂಕಾ ಅಧ್ಯಕ್ಷರು ದೇಶ ತೊರೆದು ಪರಾರಿಯಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ, ಅಧ್ಯಕ್ಷ ಗೋಟಬಯಾ ರಾಜಪಕ್ಸ ಇನ್ನೂ ದೇಶದಲ್ಲಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಸ್ಪಷ್ಟಪಡಿಸಿದ್ದರು. ಇದಾಗಿ ಒಂದು ದಿನದ ನಂತರ ಅಧ್ಯಕ್ಷರ ಸಹೋದರ ದೇಶ ಬಿಟ್ಟು ಹೋಗುವ ಯತ್ನ ನಡೆಸಿದ ಘಟನೆ ನಡೆದಿದೆ.
ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಮತ್ತು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಇಬ್ಬರೂ ದೇಶ ತೊರೆದಿಲ್ಲ, ದೇಶದಲ್ಲಿಯೇ ಇದ್ದಾರೆ ಎಂದು ಸ್ಪೀಕರ್ ಮಾಧ್ಯಮಗಳಿಗೆ ಹೇಳಿದ್ದಾರೆ.