ಬೀಜಿಂಗ್( ಚೀನಾ): ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು ಎಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ.
2013 ರಿಂದ 10 ವರ್ಷಗಳ ಕಾಲ ಚೀನಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಲಿ ಕೆಕಿಯಾಂಗ್, ಈ ವರ್ಷದ ಮಾರ್ಚ್ನಲ್ಲಿ ಲಿ ಕೆಕಿಯಾಂಗ್ ಕಾರ್ಯಭಾರದಿಂದ ಕೆಳಗಿಳಿದಿದ್ದರು. ಲಿ ಕೆಕಿಯಾಂಗ್ ಅವರ ನಾಯಕತ್ವದ ಒಂದು ದಶಕದಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದ್ವಿಗುಣಗೊಂಡಿತ್ತು. ಇತ್ತೀಚೆಗೆ ಲಿ ಕೆಕಿಯಾಂಗ್ ಶಾಂಘೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. 2013 ರಿಂದ 23ರವೆರೆಗೆ ಚೀನಾದ ನಂ.2ನೇ ನಾಯಕರಾಗಿದ್ದರು. ಜೊತೆಗೆ ಖಾಸಗಿ ಸಂಸ್ಥೆಗೆ ವಕೀಲನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೀನಾದ ಮಾಜಿ ಪ್ರೀಮಿಯರ್ ಲಿ ಕೆಕಿಯಾಂಗ್ ಅವರು ಇಂಗ್ಲಿಷ್ ಮಾತನಾಡುವ ಅರ್ಥಶಾಸ್ತ್ರಜ್ಞರಾಗಿದ್ದರು.
ಸುಧಾರಣಾವಾದಿ ಎಂದು ಕರೆಯಲ್ಪಡುವ ಲಿ ಕೆಕಿಯಾಂಗ್ ಅವರು ತಮ್ಮ ದೇಸದ ಹಿಂದುಳಿದವರಿಗಾಗಿ ಮಾಡಿದ ಕೆಲಸಗಳಿಗಾಗಿ ಅವರು ಪ್ರಸಿದ್ಧರಾಗಿದ್ದಾರೆ. ಹೆನಾನ್ ಪ್ರಾಂತ್ಯದ ಗವರ್ನರ್ ಆಗಿದ್ದ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಅವರ ಸುಧಾರಣೆಗಳು ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು. ಪಕ್ಷದ ನಾಯಕನ ಮಗನಾಗಿ ಹುಟ್ಟಿದರೂ, ಅ ಪ್ರಭಾವವನ್ನು ಬಳಸಿಕೊಂಡು ಪಕ್ಷದಲ್ಲಿ ಮುಂದುವರಿಯಲು ಕೆಕಿಯಾಂಗ್ ಸಿದ್ಧರಿರಲಿಲ್ಲ.
ಕಾನೂನು ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಲಿ ಕೆಕಿಯಾಂಗ್ ಅವರು ಮಾವೋ ಝೆಡಾಂಗ್ ಚಿಂತನೆಯ ಅಧ್ಯಯನದಲ್ಲಿ ಪೀಕಿಂಗ್ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅಲ್ಲಿ ಕಮ್ಯುನಿಸ್ಟ್ ಯೂತ್ ಲೀಗ್ ಕಾರ್ಯದರ್ಶಿಯಾಗಿದ್ದರು. ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಅವರೊಂದಿಗೆ ಯೂತ್ ಲೀಗ್ನಲ್ಲಿ ಕೆಲಸ ಮಾಡುವ ಮೂಲಕ ಹಲವು ಬೆಳವಣಿಗೆಗಳಿಗೆ ನೆರವಾದರು. ಸುಧಾರಣಾವಾದಿ ಹಣಕಾಸುದಾರರೊಂದಿಗೆ ಒಡನಾಟ ಬೆಳೆಸಿಕೊಂಡು ತಮ್ಮ ಅಧ್ಯಯನವನ್ನು ಮಾಡಿದ್ದರು.
ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾವಂತ ಅರ್ಥಶಾಸ್ತ್ರಜ್ಞ ಎನಿಸಿಕೊಂಡಿರುವ ಲಿ ಕೆಕಿಯಾಮಗ್ ಆಗಿನ ಕಮ್ಯುನಿಸ್ಟ್ ಪಕ್ಷದ ನಾಯಕ ಹು ಜಿಂಟಾವೊ ಅವರ ಉತ್ತರಾಧಿಕಾರಿಯಾಗಲು ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು. ಅನೌಪಚಾರಿಕ ನಿವೃತ್ತಿ ವಯಸ್ಸು 70ಕ್ಕಿಂತ ಲಿ ಕೆಕಿಯಾಂಗ್ ಅವರಿಗೆ ಎರಡು ವರ್ಷ ಕಡಿಮೆ ಇದ್ದರೂ, 2022ರ ಅಕ್ಟೋಬರ್ನಲ್ಲಿ ನಡೆದ ಪಕ್ಷ ಮೀಟಿಂಗ್ನಲ್ಲಿ ಲಿ ಅವರಲ್ಲಿ ಸ್ಥಾಯಿ ಸಮಿತಿಯಿಂದ ಕೈ ಬಿಡಲಾಗಿತ್ತು.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ನಿಧನ