ಕಿನ್ಶಾಸಾ (ಕಾಂಗೋ) : ಕಾಂಗೋದಲ್ಲಿ ಪ್ರಕೃತಿಯ ರೌದ್ರನರ್ತನ ಮುಂದುವರಿದಿದೆ. ಮಧ್ಯ ಕಾಂಗೋದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಒಂದೇ ಕುಟುಂಬದ 10 ಮಂದಿ ಸೇರಿದಂತೆ 22 ಜನರು ಸಾವನ್ನಪ್ಪಿದ್ದಾರೆ. ಇತ್ತ ಪೂರ್ವ ಕಾಂಗೋದಲ್ಲಿ ಭಾನುವಾರವಷ್ಟೇ ಭೂ ಭೂಕುಸಿತ ಉಂಟಾಗಿ, ನಾಲ್ವರು ಮೃತಪಟ್ಟು, 20 ಮಂದಿ ನಾಪತ್ತೆಯಾಗಿದ್ದರು.
ಕನಂಗಾ ಜಿಲ್ಲೆಯಲ್ಲಿ ಹಲವು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ನೀರು ಹರಿದುಬಂದಿದೆ. ಇದರಿಂದ ಈ ಪ್ರದೇಶದ ಅನೇಕ ಮನೆಗಳು ಮುಳುಗಡೆಯಾಗಿವೆ. ಇದರಲ್ಲಿ ಜನರು ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಈ ಪ್ರಾಂತ್ಯದ ಗವರ್ನರ್ ಜಾನ್ ಕಬೆಯಾ ತಿಳಿಸಿದರು.
ಆರಂಭದಲ್ಲಿ ಪ್ರವಾಹಕ್ಕೆ 17 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿತ್ತು. ಬಳಿಕ ಇನ್ನೂ ಐವರು ಮೃತಪಟ್ಟ ಬಗ್ಗೆ ಮಾಹಿತಿ ಬಂದಿದೆ. ಇದರಿಂದ ಈವರೆಗೂ 22 ಮಂದಿ ಪ್ರಕೃತಿ ವಿಕೋಪಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಗೋಡೆ ಕುಸಿದು ಇಡೀ ಕುಟುಂಬ ಬಲಿ: ಬಿಕುಕು ಎಂಬಲ್ಲಿ ಭಾರಿ ಮಳೆಯಿಂದ ಗೋಡೆ ಕುಸಿತ ಉಂಟಾಗಿ ಒಂದೇ ಕುಟುಂಬದ 10 ಮಂದಿ ಸಾವಿಗೀಡಾದ ಭೀಕರ ದುರಂತ ವರದಿಯಾಗಿದೆ. ಮಳೆ ಬರುತ್ತಿದ್ದ ವೇಳೆ ಎಲ್ಲರೂ ಮನೆಯಲ್ಲಿದ್ದಾಗ ಅಚಾನಕ್ಕಾಗಿ ಗೋಡೆ ಕುಸಿತ ಉಂಟಾಗಿದೆ. ಅವಶೇಷಗಳಡಿ ಸಿಲುಕಿ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದೇಹಗಳನ್ನು ಸ್ಥಳೀಯ ಆಡಳಿತ ಹೊರತೆಗೆದಿದೆ.
ದಿ ಹ್ಯಾಂಡ್ ಇನ್ ಹ್ಯಾಂಡ್ ಫಾರ್ ಇಂಟೆಗ್ರಲ್ ಡೆವಲಪ್‌ಮೆಂಟ್ ಎಂಬ ಸರ್ಕಾರೇತರ ಸಂಸ್ಥೆಯ ನಿರ್ದೇಶಕಿ ನಥಾಲಿ ಕಂಬಾಲಾ ಅವರ ಪ್ರಕಾರ, ಪ್ರವಾಹದಿಂದ ಗಣನೀಯ ಪ್ರಮಾಣದ ಹಾನಿ ಉಂಟಾಗಿದೆ. ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಪ್ರವಾಹದಲ್ಲಿ ಕನಂಗಾದ ಹೈಯರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚರ್ಚ್ ಮತ್ತು ಪ್ರಮುಖ ರಸ್ತೆಗಳು ಕಡಿತಗೊಂಡಿವೆ. ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕು ಎಂದು ಅವರು ಕೋರಿದರು.
ಕಾಂಗೋಗೆ ಮಳೆ ಕಾಟ: ಕಾಂಗೋ ದಟ್ಟಕಾಡುಗಳನ್ನು ಹೊಂದಿರುವ ಕಾರಣ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ. ಇಲ್ಲಿನ ಪ್ರದೇಶಗಳಲ್ಲಿ ಆಗಾಗ್ಗೆ ಪ್ರವಾಹ ಸಂಭವಿಸುತ್ತಲೇ ಇರುತ್ತದೆ. ಮೇ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತದಲ್ಲಿ ಪೂರ್ವ ಕಾಂಗೋದ ಕಿವು ಪ್ರಾಂತ್ಯ ಹಾನಿಗೀಡಾಗಿತ್ತು. ಮಳೆ ಮತ್ತು ಪ್ರವಾಹ ಕಾರಣಕ್ಕೆ 400 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಪೂರ್ವ ಕಾಂಗೋದಲ್ಲಿ ಭಾನುವಾರ ತಡರಾತ್ರಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ನಾಲ್ವರು ಸಾವನ್ನಪ್ಪಿ, 20 ಮಂದಿ ನಾಪತ್ತೆಯಾದ ಘಟನೆ ನಡೆದಿದೆ.
ಇದನ್ನೂ ಓದಿ: ಪಾಕಿಸ್ತಾನ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹಿಂದೂ ಮಹಿಳೆ; ಇತಿಹಾಸದಲ್ಲೇ ಇದೇ ಮೊದಲು