ಬೆಂಗಳೂರು : ಭಾರತದೊಂದಿಗೆ ಯುದ್ಧಭೂಮಿಯಲ್ಲಿ ಹೋರಾಡಲು ಸಾಕಾಗುವಷ್ಟು ಶಸ್ತ್ರಾಸ್ತ್ರಗಳಾಗಲಿ ಅಥವಾ ಹಣಕಾಸು ಸಾಮರ್ಥ್ಯವಾಗಲಿ ಪಾಕಿಸ್ತಾನಕ್ಕೆ ಇಲ್ಲ ಎಂದು ಪಾಕಿಸ್ತಾನದ ಇಬ್ಬರು ಮುಂಚೂಣಿ ಪತ್ರಕರ್ತರು ಬಹಿರಂಗಪಡಿಸಿದ ನಂತರ ಅವಮಾನಕ್ಕೀಡಾದ ಪಾಕಿಸ್ತಾನದ ಸೇನೆ ಈಗ ಮುಖ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಈ ಬಗ್ಗೆ ಮಾತನಾಡಿದ ಡಿಜಿ ಐಎಸ್ಪಿಆರ್ ಮೇಜರ್ ಜನರಲ್ ಅಹ್ಮದ್ ಷರೀಫ್, ಪುಲ್ವಾಮಾ ದಾಳಿಯ ಹೆಸರಿನಲ್ಲಿ ಭಾರತವು ಕಾಲ್ಪನಿಕ ಗುರಿಗಳ ಮೇಲೆ ದಾಳಿ ಮಾಡಿತ್ತು. ಆದರೆ ಪಾಕಿಸ್ತಾನದ ಧೈರ್ಯಶಾಲಿ, ದೃಢವಾದ ಮತ್ತು ಸೂಕ್ತವಾದ ಪ್ರತಿಕ್ರಿಯೆಯು ಭಾರತದ ದುಷ್ಟ ಯೋಜನೆಯನ್ನು ವಿಫಲಗೊಳಿಸಿತು ಎಂದರು.
ಪಾಕಿಸ್ತಾನವು ಯುದ್ಧ ಸನ್ನದ್ಧವಾಗಿಲ್ಲ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಮೇಜರ್ ಜನರಲ್ ಅಹ್ಮದ್ ಶರೀಫ್, ಒಂದು ವೇಳೆ ಅಗತ್ಯ ಬಿದ್ದರೆ ನಾವು ಭಾರತದ ಗಡಿಯೊಳಗೆ ನುಗ್ಗಿ ಯುದ್ಧ ಮಾಡುತ್ತೇವೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಆಪರೇಷನ್ ಸ್ವಿಫ್ಟ್ ರಿಟಾರ್ಟ್ ಸಮಯದಲ್ಲಿ ಪಾಕಿಸ್ತಾನದ ವಾಯುಪಡೆಯು ರಾಷ್ಟ್ರದ ದೃಢತೆ ಮತ್ತು ವಾಯುಪಡೆಯ ಸಂಕಲ್ಪವನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. ಫೆಬ್ರವರಿ 14, 2019 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ವಾಹನಗಳ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಹುತಾತ್ಮರಾಗಿದ್ದರು.
ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 26 ರಂದು ಮುಂಜಾನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆಯ 12 ಮಿರಾಜ್-2000 ಫೈಟರ್ ಜೆಟ್‌ಗಳು ನಿಖರವಾದ ಮಾರ್ಗದರ್ಶಿತ ಯುದ್ಧ ಸಾಮಗ್ರಿಗಳೊಂದಿಗೆ ದಾಳಿ ಮಾಡಿದ್ದವು. ವೈಮಾನಿಕ ದಾಳಿಯನ್ನು ಪ್ರಾರಂಭಿಸುವ ಮತ್ತು ಸುರಕ್ಷಿತವಾಗಿ ಭಾರತದ ನೆಲಕ್ಕೆ ಹಿಂತಿರುಗುವ ಸಂಪೂರ್ಣ ಕಾರ್ಯಾಚರಣೆಗೆ 'ಆಪರೇಷನ್ ಬಂದರ್' ಎಂಬ ಸಂಕೇತನಾಮವನ್ನು ನೀಡಲಾಗಿತ್ತು. ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ವೈಮಾನಿಕ ದಾಳಿಯ ಯೋಜನೆಗಳು ಸೋರಿಕೆಯಾಗದಂತೆ ನೋಡಿಕೊಳ್ಳಲು ಈ ಹೆಸರನ್ನು ಇಡಲಾಗಿತ್ತು.
ಒಂದು ವೇಳೆ ನಮ್ಮ ಗಡಿಯೊಳಗೆ ನುಗ್ಗಿದ್ದೇ ಆದಲ್ಲಿ ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವುದು ಮಾತ್ರವಲ್ಲದೆ ಶತ್ರುಗಳ ದೇಶಕ್ಕೆ ನುಗ್ಗಿ ಯುದ್ಧ ಮಾಡಲು ಪಾಕಿಸ್ತಾನದ ವಾಯುಪಡೆ ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಅಹ್ಮದ್ ಶರೀಫ್ ಹೇಳಿದರು. ಭಾರತದೊಂದಿಗೆ ಹೋರಾಡಲು ಸಾಕಾಗುವಷ್ಟು ಶಸ್ತ್ರಾಸ್ತ್ರ ಅಥವಾ ಹಣಕಾಸು ಪಾಕಿಸ್ತಾನದ ಬಳಿ ಇಲ್ಲ ಎಂದು ಹಿಂದಿನ ಆರ್ಮಿ ಚೀಫ್ ಜನರಲ್ ಕಮರ್ ಜಾವೇದ ಬಾಜ್ವಾ ಹೇಳಿದ್ದರು ಎಂಬುದನ್ನು ಪಾಕಿಸ್ತಾನದ ಪ್ರಮುಖ ಪತ್ರಕರ್ತರಾದ ಹಮೀದ್ ಮೀರ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇದರ ನಂತರ ಮುಖಭಂಗಕ್ಕೊಳಗಾದ ಪಾಕಿಸ್ತಾನ ಮಿಲಿಟರಿ ಭಾರತದ ವಿರುದ್ಧ ಆಕ್ರಮಣ ಮಾಡುವುದಾಗಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿದೆ.
ಪಾಕಿಸ್ತಾನವು ಭಾರತದೊಂದಿಗೆ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಜನರಲ್ ಬಾಜ್ವಾ ಒಪ್ಪಿಕೊಂಡಿದ್ದರು ಎಂದು ಹಮೀದ್ ಮೀರ್ ಹೇಳಿದ್ದಾರೆ. ಭಾರತದ ಸೇನೆಯ ಮುಂದೆ ಪಾಕಿಸ್ತಾನದ ಸೇನೆ ಯಾವ ಲೆಕ್ಕಕ್ಕೂ ಇಲ್ಲ ಎಂದು ಕಮಾಂಡರ್ಗಳ ಮೀಟಿಂಗ್ನಲ್ಲಿ ಬಾಜ್ವಾ ಹೇಳಿದ್ದರು ಎಂದು ಮೀರ್ ತಿಳಿಸಿದ್ದರು.
ಇದನ್ನೂ ಓದಿ : ಸುಡಾನ್: ಸಂಪೂರ್ಣ ಕದನವಿರಾಮಕ್ಕೆ ಒಪ್ಪದ ಸೇನಾ ಮುಖ್ಯಸ್ಥರು, ವಿನಾಶದತ್ತ ದೇಶ