ಟೆಲ್ ಅವೀವ್: ಪ್ರಸ್ತುತ ಗಾಝಾದಲ್ಲಿ ಜಾರಿಯಲ್ಲಿರುವ ಮಾನವೀಯ ಕದನ ವಿರಾಮವನ್ನು ವಿಸ್ತರಿಸುವಂತೆ ಇಸ್ರೇಲ್ನ ಮನವೊಲಿಸುವ ಸಲುವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಇಸ್ರೇಲ್ನ ಟೆಲ್ ಅವೀವ್‌ಗೆ ಆಗಮಿಸಿದ್ದಾರೆ. ಗಾಝಾದಲ್ಲಿ ಮೊದಲ ಬಾರಿಗೆ ನವೆಂಬರ್ 24 ರಂದು ಜಾರಿಗೆ ಬಂದ ಮತ್ತು ಮಂಗಳವಾರ ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಲಾದ ಮೂಲ ನಾಲ್ಕು ದಿನಗಳ ಕದನ ವಿರಾಮವು ಗುರುವಾರ ಬೆಳಗ್ಗೆ 7 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 10.20ಕ್ಕೆ) ಕೊನೆಗೊಳ್ಳಲಿದೆ.
ಅಕ್ಟೋಬರ್ 7ರಂದು ಅಪಹರಣಕ್ಕೊಳಗಾದ 10 ತಿಂಗಳ ಮಗು ಕಫಿರ್ ಬಿಬಾಸ್ ಮತ್ತು ಮಗುವಿನ ನಾಲ್ಕು ವರ್ಷದ ಸಹೋದರ ಮತ್ತು ತಾಯಿಯನ್ನು ಕೊಲ್ಲಲಾಗಿದೆ ಎಂಬ ವರದಿಗಳು ಬಂದಿದ್ದರಿಂದ ಕದನ ವಿರಾಮ ವಿಸ್ತರಿಸಲಾಗುವುದಿಲ್ಲ ಎಂದು ಇಸ್ರೇಲ್ ಕಠಿಣ ನಿಲುವು ತಳೆದಿರುವುದರಿಂದ ಬ್ಲಿಂಕೆನ್ ಸ್ವತಃ ಆಗಮಿಸಿ ಇಸ್ರೇಲ್ನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇಸ್ರೇಲ್ ನಾಗರಿಕರನ್ನು ಹಮಾಸ್ ಹತ್ಯೆ ಮಾಡಿದೆ ಎಂಬ ವರದಿಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿದೆ. ಬುಧವಾರ ರಾತ್ರಿ ಸಭೆ ಸೇರಿದ ಇಸ್ರೇಲ್ ಯುದ್ಧ ಕ್ಯಾಬಿನೆಟ್ ಕೂಡ ಕದನ ವಿರಾಮ ವಿಸ್ತರಿಸಲು ಉತ್ಸುಕತೆ ತೋರಿಸಿಲ್ಲ.
ಬುಧವಾರ ರಾತ್ರಿ ಇಸ್ರೇಲ್‌ಗೆ ಆಗಮಿಸುವ ಮೊದಲು, ಬ್ಲಿಂಕೆನ್ ಅವರು ಗಾಝಾದಲ್ಲಿ ಕದನ ವಿರಾಮವನ್ನು ವಿಸ್ತರಿಸುವತ್ತ ಗಮನ ಹರಿಸುವುದಾಗಿ ಹೇಳಿದ್ದರು. ಹಮಾಸ್ ಹಿಡಿದಿಟ್ಟುಕೊಂಡಿರುವ ಮತ್ತಷ್ಟು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವತ್ತ ಮತ್ತು ಅದೇ ಸಮಯದಲ್ಲಿ ಗಾಝಾದೊಳಗೆ ಇನ್ನಷ್ಟು ಮಾನವೀಯ ಪರಿಹಾರ ಸಾಮಗ್ರಿ ಹರಿಯುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಕದನ ವಿರಾಮ ಮುಂದುವರಿಕೆಯ ಬಗ್ಗೆ ಅಧಿಕೃತ ಹೇಳಿಕೆ ಬರುವ ಮುನ್ನ ತನ್ನ ಅಲ್ ಕಸ್ಸಾಮ್ ಮಿಲಿಟರಿ ಬ್ರಿಗೇಡ್ನ ಹೋರಾಟಗಾರರು ಯುದ್ಧ ಸನ್ನದ್ಧವಾಗಿರುವಂತೆ ಗುರುವಾರ ಬೆಳಗ್ಗೆ ಹಮಾಸ್ ಮಿಲಿಟರಿ ತನ್ನ ಹೋರಾಟಗಾರರಿಗೆ ತಿಳಿಸಿದೆ. ಕದನ ವಿರಾಮ ವಿಸ್ತರಣೆ ಮಾತುಕತೆಯಲ್ಲಿನ ಬಿಕ್ಕಟ್ಟಿಗೆ ಇಸ್ರೇಲ್ ಕಾರಣ ಎಂದು ಹಮಾಸ್ ಪ್ರತ್ಯೇಕ ಹೇಳಿಕೆಯಲ್ಲಿ ಆರೋಪಿಸಿದೆ.
ಏಳು ಒತ್ತೆಯಾಳು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೂವರು ಮೃತ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಪಡೆದು ಕದನ ವಿರಾಮ ವಿಸ್ತರಿಸುವಂತೆ ಕೇಳಿದ ತನ್ನ ಪ್ರಸ್ತಾಪವನ್ನು ಇಸ್ರೇಲ್ ತಿರಸ್ಕರಿಸಿದೆ ಎಂದು ಹಮಾಸ್ ಹೇಳಿದೆ. ಇಸ್ರೇಲ್ ನಡೆಸಿದ ಬಾಂಬ್ ದಾಳಿಯಿಂದಲೇ ಒತ್ತೆಯಾಳಾಗಿದ್ದ ಇಸ್ರೇಲಿ ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಆರೋಪಿಸಿದೆ.
ಇದನ್ನೂ ಓದಿ: ಪ್ರತಿದಿನ ಯುದ್ಧಕ್ಕೆ $260 ಮಿಲಿಯನ್ ಖರ್ಚು; ಸಂಕಷ್ಟದಲ್ಲಿ ಇಸ್ರೇಲ್ ಆರ್ಥಿಕತೆ