ಜಕಾರ್ತ(ಇಂಡೋನೇಷ್ಯಾ): ಕಳೆದ ನವೆಂಬರ್ನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪಕ್ಕೆ 300 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ, ಇಂಡೋನೇಷ್ಯಾದಲ್ಲಿ ಮತ್ತೊಂದು ಪ್ರಬಲ ಭೂಕಂಪನ ಉಂಟಾಗಿದೆ. ತನಿಂಬಾರ್ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಭೂಮಿ ನಡುಗಿದ್ದು, ರಿಕ್ಟರ್ ಮಾಪನದಲ್ಲಿ 7.7 ತೀವ್ರತೆ ದಾಖಲಾಗಿದೆ. ಸಾವು-ನೋವಿನ ಬಗ್ಗೆ ಸದ್ಯಕ್ಕೆ ಮಾಹಿತಿ ತಿಳಿದುಬಂದಿಲ್ಲ.
ದೇಶದ ನೈಋತ್ಯ ಭಾಗದಲ್ಲಿರುವ ಟುಯಲ್ ಪ್ರದೇಶ ಎಂದು ಕರೆಯುವ ತನಿಂಬಾರ್ನ 342 ಕಿಮೀ ವ್ಯಾಪ್ತಿಯಲ್ಲಿ ಧರೆ ನಡುಗಿದೆ. ರಿಕ್ಟರ್ ಮಾಪನದಲ್ಲಿ 7.7 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್ಸಿ) ತಿಳಿಸಿದೆ. ಭೂಕಂಪನವು ಸ್ಥಳೀಯ ಕಾಲಮಾನ 02 ಗಂಟೆ 47 ನಿಮಿಷದ ಸುಮಾರಿನಲ್ಲಿ ಅಪ್ಪಳಿಸಿದೆ. ಇದು ಆಸ್ಟ್ರೇಲಿಯಾ, ಟಿಮೋರ್ ಲೆಸ್ಟೆ ಮತ್ತು ಇಂಡೋನೇಷ್ಯಾದ ಹಲವು ಭಾಗಗಳಲ್ಲಿ ಕಂಡುಬಂದಿದೆ. ಹೆಚ್ಚೂ ಕಡಿಮೆ 14 ಮಿಲಿಯನ್ ಜನವಸತಿ ಪ್ರದೇಶದ 2000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಲುಗಾಡುವಿಕೆಯನ್ನು ಜನರು ಅನುಭವಿಸಿದ್ದಾರೆ ಎಂದು ಇಎಂಎಸ್ಸಿ ಹೇಳಿದೆ.
ಸುನಾಮಿ ಎಚ್ಚರಿಕೆ: ಭೂಕಂಪನ ಸಂಭವಿಸಿದ ಪ್ರದೇಶದಲ್ಲಿ ತೀವ್ರ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾದರೂ, ಪ್ರಾಣ ಹಾನಿ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಂದಿನ ಕೆಲವು ಗಂಟೆಗಳಲ್ಲಿ ಮತ್ತಷ್ಟು ಕಂಪನ ಉಂಟಾಗಬಹುದು, ಹಾನಿಗೊಳಗಾದ ಪ್ರದೇಶದಿಂದ ಜನರು ಸಾಧ್ಯವಾದಷ್ಟು ದೂರವಿರಿ. ಭೂಕಂಪನದ ಬಳಿಕ ಸುನಾಮಿ ಅಲೆಗಳು ಏಳುವ ಅಪಾಯವಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಅಥವಾ ಅಲ್ಲಿಂದ ತೆರವಾಗಿ ಎಂದು ಯುರೋಪಿಯನ್ ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ಸೂಚನೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಎಂಎಸ್ಸಿ, ನಿಮಗೆ ಅಗತ್ಯವಿಲ್ಲದಿದ್ದರೆ ಸಾಧ್ಯವಾದಷ್ಟು ಬೇಗ ಅಲ್ಲಿಂದ ದೂರ ಹೋಗಿ. ಭೂಕಂಪನದ ಸ್ಥಳದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಜಾಗರೂಕತೆ ವಹಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳಿ ಎಂದು ಅದು ಕೋರಿದೆ.
ಭೀಕರ ಭೂಕಂಪನದ ಕಹಿನೆನಪು: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಕಳೆದ ವರ್ಷದ ನವೆಂಬರ್ನಲ್ಲಿ 5.4 ತೀವ್ರತೆಯ ಭೂಕಂಪನ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಭೂಮಿ ಅಲುಗಾಡಿದ್ದಕ್ಕೆ ಮನೆಗಳು, ಮರಗಳು, ಬೃಹತ್ ಕಟ್ಟಡಗಳು ಧರೆಗುರುಳಿ ಬಿದ್ದು ಮಕ್ಕಳು, ಮಹಿಳೆಯರು ಸೇರಿ 318 ಜನರನ್ನು ಆಹುತಿ ಪಡೆದಿತ್ತು. 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಭೂಕಂಪನದ ಬಳಿಕ ಸಿಯಾಂಜೂರ್‌ನಲ್ಲಿ 62,545 ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಮಧ್ಯಾಹ್ನದ 1 ಗಂಟೆಯ ವೇಳೆ ಸಂಭವಿಸಿದ್ದ ಭೂಕಂಪನದಿಂದ ಕಚೇರಿಗಳು, ಶಾಲಾ ತರಗತಿಗಳು ನಡೆಯುತ್ತಿರುವಾಗ ಕಟ್ಟಡಗಳು ಕುಸಿದುಬಿದ್ದಿದ್ದವು. ಇದರಿಂದಾಗಿ ಭಾರಿ ಅನಾಹುತ ಸಂಭವಿಸಲು ಕಾರಣವಾಯಿತು.
ಭಾರತದಲ್ಲೂ ಪದೇ ಪದೇ ಕಂಪನ: ಭಾರತದಲ್ಲೂ ಆಗಾಗ್ಗೆ ಕಡಿಮೆ ತೀವ್ರತೆಯ ಭೂಕಂಪನಗಳು ಉಂಟಾಗುತ್ತಿದ್ದು, ಉತ್ತರಾಖಂಡದ ಪವಿತ್ರ ಕ್ಷೇತ್ರವಾದ ಜೋಶಿಮಠದಲ್ಲಿ ದಿನವೂ ಭೂಮಿ ಬಾಯ್ದೆರೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಹೊಡೆತಕ್ಕೆ ಭೂಮಿ ಅಲುಗಾಡಿ ಮನೆಗಳು, ರಸ್ತೆಗಳು ಬಿರುಕು ಬಿಡುತ್ತಿವೆ. ಇದರಿಂದ ತೀವ್ರ ಅಪಾಯದ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇಡೀ ಜೋಶಿಮಠವನ್ನೇ ಖಾಲಿ ಮಾಡಲು ಸರ್ಕಾರ ಈಗಾಗಲೇ ಸೂಚಿಸಿದೆ.
ಇದನ್ನೂ ಓದಿ: ಜೋಶಿಮಠದಲ್ಲಿ ಭೂಕಂಪನದಿಂದ ಬಿರುಕು ಬಿಟ್ಟ ಮನೆಗಳಿಂದ 50 ಕುಟುಂಬಗಳ ಸ್ಥಳಾಂತರ