ಇಸ್ಲಾಮಾಬಾದ್: ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶ ಭೂಕಂಪನದ ಕೇಂದ್ರಬಿಂದುವಾಗಿದೆ. ಇಲ್ಲಿನ 180 ಕಿ.ಮೀ. ಆಳದಲ್ಲಿ ಕಂಪನ ಘಟಿಸಿದೆ ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಹೇಳಿದೆ.
ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳ ಜನರಿಗೆ ಕಂಪನದ ಅನುಭವವಾಗಿದೆ. ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್, ಕೊಹತ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿಯೂ ಭೂಮಿ ನಡುಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಭೂಕಂಪನದಿಂದ ಆತಂಕಗೊಂಡ ಜನರು ತಕ್ಷಣ ತಮ್ಮ ತಮ್ಮ ಮನೆಗಳು ಹಾಗೂ ಕಟ್ಟಡಗಳಿಂದ ಹೊರ ಬಂದಿದ್ದರು. ಖೈಬರ್ ಪಖ್ತುನ್ಖ್ವಾ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಧ್ಯಂತರ ವರದಿಯ ಪ್ರಕಾರ, ಪ್ರಾಂತ್ಯದಲ್ಲಿ 8 ಮನೆಗಳು ಭಾಗಶಃ ಹಾನಿಗೊಳಗಾಗಿದ್ದರೆ, ಛಾವಣಿ, ಗೋಡೆ ಮತ್ತು ಮನೆ ಕುಸಿತ ಘಟನೆಗಳಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಆರು ಜನರು ಗಾಯಗೊಂಡಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.
"ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 150 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸೈದು ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ಸ್ವಾತ್ ಜಿಲ್ಲಾ ಪೊಲೀಸ್ ಅಧಿಕಾರಿ ಶಫಿವುಲ್ಲಾ ಗಂದಾಪುರ್ ತಿಳಿಸಿದರು. ಭೂಕಂಪದ ಸಮಯದಲ್ಲಿ ರಾವಲ್ಪಿಂಡಿಯ ಮಾರುಕಟ್ಟೆಗಳಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಸರ್ಕಾರಿ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, "ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಜಾಗರೂಕರಾಗಿರಲು ಪ್ರಧಾನಿ ಶಹಬಾಜ್ ಷರೀಫ್ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಅವರ ಸೂಚನೆಯ ಮೇರೆಗೆ ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ" ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಹೇಳಿದೆ.
ಹಲವೆಡೆ ಕಂಪನ: ಅಂತಾರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಪಾಕಿಸ್ತಾನದ ಹೊರತಾಗಿ, ಭಾರತ, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್, ಕಜಕಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ.
ಪಾಕಿಸ್ತಾನದಲ್ಲಿ ಭೂಕಂಪಗಳು ಸಾಮಾನ್ಯ. ಈ ವರ್ಷದ ಜನವರಿಯಲ್ಲಿ ಇಸ್ಲಾಮಾಬಾದ್‌ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. 2005ರಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪಕ್ಕೆ 74,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
ಭಾರತದ ಭೂಕಂಪನ ವರದಿ: ದೆಹಲಿ ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಭೂಕಂಪನದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ರಾಜಸ್ಥಾನಗಳಲ್ಲೂ ಭೂ ಕಂಪಿಸಿದ್ದು, ಜನರು ತಮ್ಮ ಮನೆಯಿಂದ ಹೊರಗೋಡಿ ಬಂದಿದ್ದರು.
ಇದನ್ನೂ ಓದಿ: ದೆಹಲಿ, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲ ಭೂಕಂಪನ.. 6.6 ತೀವ್ರತೆ ದಾಖಲು