ಢಾಕಾ(ಬಾಂಗ್ಲಾದೇಶ): ಜನವರಿ 7, 2024ರಂದು ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳನ್ನು ತಡೆಗಟ್ಟಲು ಶತಪ್ರಯತ್ನ ಮಾಡುತ್ತಿರುವ ದೇಶದ ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಸರ್ಕಾರದ ವಿರುದ್ಧ ಅಸಹಕಾರ ಆಂದೋಲನ ಘೋಷಿಸಿದೆ. ಕಳೆದ ಅಕ್ಟೋಬರ್ನಿಂದಲೇ ಬಿಎನ್ಪಿ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಬಂದ್ ಹಾಗೂ ಮುಷ್ಕರಗಳನ್ನು ನಡೆಸುತ್ತಿದೆ.
ದೇಶದ ಅತಿದೊಡ್ಡ ವಿರೋಧ ಪಕ್ಷವಾಗಿರುವ ಬಿಎನ್ಪಿ, ಸರ್ಕಾರದೊಂದಿಗೆ ಸಹಕರಿಸದಂತೆ ಮತ್ತು ಚುನಾವಣೆಗಳನ್ನು ಬಹಿಷ್ಕರಿಸುವಂತೆ ಎಲ್ಲಾ ವರ್ಗದ ಜನರಿಗೆ ಮತ್ತು ಸರ್ಕಾರಿ ನೌಕರರಿಗೆ ಒತ್ತಾಯಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಲ್ಲದೆ ಇನ್ನು ಮುಂದೆ ಯಾವುದೇ ರೀತಿಯ ತೆರಿಗೆ ಪಾವತಿಸದಂತೆಯೂ ಅದು ಜನರಿಗೆ ಕರೆ ನೀಡಿದೆ.
ಮಂಗಳವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎನ್ಪಿ ಹಿರಿಯ ಜಂಟಿ ಪ್ರಧಾನ ಕಾರ್ಯದರ್ಶಿ ರುಹುಲ್ ಕಬೀರ್ ರಿಜ್ವಿ, ತಟಸ್ಥ ಸರ್ಕಾರದ ಉಸ್ತುವಾರಿಯಲ್ಲಿ ಚುನಾವಣೆ ನಡೆಸಬೇಕೆಂಬ ನಮ್ಮ ಬೇಡಿಕೆ ಈಡೇರದ ಕಾರಣದಿಂದ ಬಿಎನ್ಪಿ ಹಂಗಾಮಿ ಅಧ್ಯಕ್ಷ ತಾರಿಕ್ ರಹಮಾನ್ ಈ ಆಂದೋಲನವನ್ನು ಘೋಷಿಸಿದ್ದಾರೆ ಎಂದು ಹೇಳಿದರು. ಆಡಳಿತಾರೂಢ ಬಾಂಗ್ಲಾದೇಶ ಅವಾಮಿ ಲೀಗ್ (ಎಎಲ್) ಪಕ್ಷವು ಜನವರಿ 7ರಂದು ನಕಲಿ ಚುನಾವಣೆ ನಡೆಸುತ್ತಿದೆ ಎಂದು ರಿಜ್ವಿ ಹೇಳಿದರು. ಆದರೆ ಬಿಎನ್ಪಿಯ ಬೇಡಿಕೆ ಅಸಂವಿಧಾನಿಕವಾಗಿದೆ ಎಂದು ಬಾಂಗ್ಲಾದೇಶದ ಕಾನೂನು ಸಚಿವ ಅನಿಸುಲ್ ಹಕ್ ಈ ಹಿಂದೆ ಹೇಳಿದ್ದರು.
ಜನವರಿಯಲ್ಲಿ 300 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 1,886 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 12 ನೇ ರಾಷ್ಟ್ರೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಒಟ್ಟು ಅಭ್ಯರ್ಥಿಗಳ ಪೈಕಿ 1,529 ಅಭ್ಯರ್ಥಿಗಳು ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸೇರಿದಂತೆ 27 ಪಕ್ಷಗಳಿಗೆ ಸೇರಿದವರಾಗಿದ್ದಾರೆ. 357 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ.
ಅಕ್ಟೋಬರ್ ಅಂತ್ಯದಿಂದ ದೇಶದಲ್ಲಿ ಪ್ರತಿಪಕ್ಷಗಳ ಆಂದೋಲನ ನಡೆಯುತ್ತಿದ್ದು, ವಿಧ್ವಂಸಕ ಕೃತ್ಯಗಳು ಹೆಚ್ಚಾಗುತ್ತಿವೆ. ಢಾಕಾ ಮತ್ತು ದೇಶದ ಇತರ ಸ್ಥಳಗಳಲ್ಲಿ ಪೊಲೀಸರು ಮತ್ತು ಬಿಎನ್ಪಿ ಕಾರ್ಯಕರ್ತರ ನಡುವೆ ಪ್ರತಿದಿನ ಮಾರಣಾಂತಿಕ ಘರ್ಷಣೆಗಳು ನಡೆಯುತ್ತಿವೆ. ಮಂಗಳವಾರ, ಅಪರಿಚಿತ ದುಷ್ಕರ್ಮಿಗಳು ಢಾಕಾದಲ್ಲಿ ಪ್ಯಾಸೆಂಜರ್ ರೈಲಿನ ಮೂರು ಬೋಗಿಗಳಿಗೆ ಬೆಂಕಿ ಹಚ್ಚಿ ನಾಲ್ವರನ್ನು ಕೊಂದಿದ್ದಾರೆ. ನಿರಂತರ ಹಿಂಸಾಚಾರ ನಡೆಯುತ್ತಿರುವುದರಿಂದ ಚುನಾವಣೆಯಲ್ಲಿ ಸೂಕ್ತ ಭದ್ರತೆಗಾಗಿ ಬಾಂಗ್ಲಾದೇಶದಾದ್ಯಂತ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಇದನ್ನೂ ಓದಿ: ಏಳು ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ?