ಖಾನ್ ಯೂನಿಸ್ (ಗಾಜಾ ಪಟ್ಟಿ) : ಹಮಾಸ್ ಸಂಘಟನೆಯ ಘೋರ ದಾಳಿಯ ನಂತರ ಇಸ್ರೇಲ್ನಿಂದ ಮುತ್ತಿಗೆ ಹಾಕಲ್ಪಟ್ಟಿರುವ ಗಾಜಾ ಪಟ್ಟಿಯಲ್ಲಿನ ಲಕ್ಷಾಂತರ ಅಸಹಾಯಕ ನಾಗರಿಕರಿಗೆ ನೆರವು ತಲುಪಿಸಲು ಉಂಟಾಗಿರುವ ಅಡ್ಡಿಯ ನಿವಾರಣೆಗೆ ಅಮೆರಿಕ ಪ್ರಯತ್ನಿಸುತ್ತಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ.
ಇಸ್ರೇಲ್ ಮಂಗಳವಾರ ಮುಂಜಾನೆಯಿಂದ ಗಾಜಾ ಮೇಲೆ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸುತ್ತಿದೆ. ನಾಗರಿಕರು ಸ್ಥಳಾಂತರಗೊಳ್ಳುವಂತೆ ತಿಳಿಸಿದ ಪ್ರದೇಶಗಳ ಮೇಲೂ ದಾಳಿ ನಡೆದಿದೆ. ಹಮಾಸ್ ಅನ್ನು ನಾಮಾವಶೇಷ ಮಾಡುವ ಉದ್ದೇಶದಿಂದ ಗಾಜಾ ಪಟ್ಟಿಯ ಭೂಪ್ರದೇಶದ ಉತ್ತರ ಭಾಗದ ಮೇಲೆ ಪ್ರಮುಖ ದಾಳಿ ನಡೆಸಲು ಇಸ್ರೇಲ್ ಸಜ್ಜಾಗಿದೆ.
ದಕ್ಷಿಣ ಗಾಜಾ ನಗರಗಳಾದ ರಫಾ ಮತ್ತು ಖಾನ್ ಯೂನಿಸ್ ಹೊರಗೆ ನಡೆದ ಭಾರಿ ದಾಳಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಗಾಜಾ ನಿವಾಸಿಗಳು ವರದಿ ಮಾಡಿದ್ದಾರೆ. ರಫಾದಲ್ಲಿ 27 ಜನರು ಮತ್ತು ಖಾನ್ ಯೂನಿಸ್ನಲ್ಲಿ 30 ಜನ ಸಾವನ್ನಪ್ಪಿದ್ದಾರೆ ಎಂದು ಹಮಾಸ್ನ ಹಿರಿಯ ಅಧಿಕಾರಿ ಮತ್ತು ಮಾಜಿ ಆರೋಗ್ಯ ಸಚಿವ ಬಾಸೆಮ್ ನೈಮ್ ತಿಳಿಸಿದ್ದಾರೆ.
ಕಳೆದ ವಾರ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 1,400 ಜನರು ಸಾವನ್ನಪ್ಪಿದ ನಂತರ ಇಸ್ರೇಲ್ ಹಮಾಸ್ ಆಡಳಿತವಿರುವ ಗಾಜಾ ವಿರುದ್ಧ ನಿರಂತರ ವೈಮಾನಿಕ ದಾಳಿಗಳನ್ನು ನಡೆಸಿದೆ. ಈ ಮಧ್ಯೆ ಡಜನ್ಗಟ್ಟಲೆ ಇಸ್ರೇಲಿಗಳು ಮತ್ತು ಇತರ ದೇಶಗಳ ನಾಗರಿಕರನ್ನು ಹಮಾಸ್ ಕಡೆಯವರು ಸೆರೆಹಿಡಿದು ಗಾಜಾಗೆ ಕರೆತಂದರು. ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 2,778 ಜನರು ಸಾವನ್ನಪ್ಪಿದ್ದಾರೆ ಮತ್ತು 9,700 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇಷ್ಟಾದರೂ ಗಾಜಾ ಉಗ್ರರು ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುವುದನ್ನು ನಿಲ್ಲಿಸಿಲ್ಲ.
ಮನೆಗಳನ್ನು ತೊರೆದ 10ಲಕ್ಷಕ್ಕೂ ಹೆಚ್ಚು ನಾಗರಿಕರು: 1 ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೈನ್ ನಾಗರಿಕರು ತಮ್ಮ ಮನೆಗಳನ್ನು ತೊರೆದಿದ್ದಾರೆ ಮತ್ತು 60 ಪ್ರತಿಶತದಷ್ಟು ಜನರು ಈಗ ಸ್ಥಳಾಂತರಿಸುವ ವಲಯದ ದಕ್ಷಿಣಕ್ಕೆ ಸುಮಾರು 14 ಕಿಲೋಮೀಟರ್ ಉದ್ದದ (8 ಮೈಲಿ) ಪ್ರದೇಶದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ನೀರು ಮತ್ತು ಔಷಧಗಳ ಪೂರೈಕೆ ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ ಮತ್ತು ಆಸ್ಪತ್ರೆಗಳಲ್ಲಿ ವಿದ್ಯುತ್ ಕಡಿತವಾಗಿರುವುದರಿಂದ ಈ ಪ್ರದೇಶದಲ್ಲಿ ಆಡಳಿತವು ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ ಎಂದು ಸಹಾಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಇಸ್ರೇಲ್ ಯುದ್ಧ ಮುಂದುವರೆಸಿದರೆ, ಮಧ್ಯಪ್ರವೇಶ ಮಾಡಬೇಕಾಗುತ್ತೆ- ಇರಾನ್ ಎಚ್ಚರಿಕೆ: ಏತನ್ಮಧ್ಯೆ, ಇಸ್ರೇಲ್ ಗಾಜಾ ಮೇಲೆ ನೆಲದ ಮೂಲಕ ಆಕ್ರಮಣ ಮಾಡಿದರೆ ತಾನು ಯುದ್ಧದಲ್ಲಿ ಮಧ್ಯ ಪ್ರವೇಶಿಸಬಹುದು ಎಂದು ಇರಾನ್ನ ವಿದೇಶಾಂಗ ಸಚಿವರು ಎಚ್ಚರಿಸಿದ್ದಾರೆ. ಹಮಾಸ್ ಹಾಗೂ ಹೆಜ್ಬೊಲ್ಲಾ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವ ಇರಾನ್ ಆಗಾಗ ಇಂಥ ಬೆದರಿಕೆಗಳನ್ನು ಒಡ್ಡುತ್ತಲೇ ಇರುತ್ತದೆ.
ಹಮಾಸ್ನ ಮಿಲಿಟರಿ ವಿಭಾಗವು ಒತ್ತೆಯಾಳುಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಗಾಯಗೊಂಡಿರುವ ಮಹಿಳೆಯೊಬ್ಬಳು ತನ್ನ ಕೈಯನ್ನು ಬ್ಯಾಂಡೇಜ್ಗಳಿಂದ ಸುತ್ತಿಕೊಂಡಿರುವುದನ್ನು ತೋರಿಸಲಾಗಿದೆ. ತನ್ನನ್ನು 21 ವರ್ಷದ ಮಿಯಾ ಸ್ಕೀಮ್ ಎಂದು ಗುರುತಿಸಿಕೊಂಡ ಮಹಿಳೆ, ಮಾತನಾಡುವಾಗ ಸ್ವಲ್ಪ ನಡುಗುತ್ತಿರುವುದು ಕಾಣಿಸುತ್ತದೆ. ಹಿನ್ನೆಲೆಯಲ್ಲಿ ಸ್ಪೋಟದ ಶಬ್ದ ಕೇಳಿಸುತ್ತದೆ.
ಗಾಜಾದ ದಕ್ಷಿಣದಲ್ಲಿ 4,00,000 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ವಿಶ್ವಸಂಸ್ಥೆಯ ಏಜೆನ್ಸಿಯ ಶಾಲೆಗಳು ಮತ್ತು ಇತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಈ ಪ್ರದೇಶದಲ್ಲಿ ಸಿಲುಕಿರುವ ತನ್ನ ಪ್ರತಿಯೊಬ್ಬ ಸಿಬ್ಬಂದಿಗೆ ದಿನಕ್ಕೆ ಕೇವಲ 1 ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಆಸ್ಪತ್ರೆಗಳಲ್ಲಿನ ಜನರೇಟರ್ ಇಂಧನ ಇಷ್ಟರಲ್ಲೇ ಖಾಲಿಯಾಗುವ ನಿರೀಕ್ಷೆಯಿದೆ. ಅಂದರೆ ಇನ್ಕ್ಯುಬೇಟರ್ಗಳು ಮತ್ತು ವೆಂಟಿಲೇಟರ್ಗಳಂಥ ಜೀವ ಉಳಿಸುವ ಉಪಕರಣಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಎಂದು ಯುಎನ್ ಹೇಳಿದೆ.
ಇದನ್ನೂ ಓದಿ : ಗಾಜಾದಲ್ಲಿ ಆಹಾರ, ನೀರಿಗೆ ತತ್ವಾರ; ಕಂಡಲ್ಲಿ ಗುಂಡಿಕ್ಕಿದ ಹಮಾಸ್ ಉಗ್ರರ ಅಟ್ಟಹಾಸದ ವಿಡಿಯೋ ಹಂಚಿಕೊಂಡ ಇಸ್ರೇಲ್