ಕೊಲಂಬೊ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಪ್ರಸಂಗವು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಈಗ ಒಂದು ಪಾಠವಾಗಿದೆ. ಚೀನಾದ ಸಾಲದ ಸುಳಿಗೆ ಸಿಲುಕಿ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ಇಂದಿನ ಸ್ಥಿತಿ, ಬಿಆರ್ಐ ಸಾಲದ ಚಕ್ರವ್ಯೂಹವು ರಾಷ್ಟ್ರವೊಂದನ್ನು ಹೇಗೆ ಹಾಳು ಮಾಡಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಆಮದುಗಳ ಮೇಲಿನ ದೇಶದ ಅವಲಂಬನೆ ಮತ್ತು ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (Belt and Road Initiative -BRI) ಯೋಜನೆಯ ಮೂಲಕ ಆರ್ಥಿಕವಾಗಿ ಲಾಭಕರವಲ್ಲದ ಚೀನಾದ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಪಡೆದುಕೊಂಡ ಕಾರಣಗಳಿಂದ ಶ್ರೀಲಂಕಾ ಈಗ ವಿಪರೀತ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಅಲ್ಲದೇ ಏಷ್ಯಾ ಹಾಗೂ ಯುರೋಪಿನ ಇನ್ನೂ ಹಲವಾರು ದೇಶಗಳು ಕುಸಿಯುವ ಅಂಚಿನಲ್ಲಿವೆ ಎಂದು ಯೂರೋಪ್ ಏಷ್ಯಾ ಫೌಂಡೇಶನ್ ವರದಿ ಹೇಳಿದೆ.
ಉದಾಹರಣೆಗೆ ನೋಡುವುದಾದರೆ, ಜಾಂಬಿಯಾದಲ್ಲಿ ಒಂದು ವಿಮಾನ ನಿಲ್ದಾಣ, ಎರಡು ಅತ್ಯಾಧುನಿಕ ಸ್ಟೇಡಿಯಂಗಳು ಮತ್ತು ಒಂದು ವಿದ್ಯುತ್ ಸ್ಥಾವರ ಸೇರಿದಂತೆ ಇನ್ನೂ ಹಲವಾರು ಬಿಆರ್ಐ ಯೋಜನೆಗಳು ಪ್ರಗತಿಯಲ್ಲಿವೆ. ಅಂದರೆ ಜಾಂಬಿಯಾ ಸದ್ಯ ಭರಿಸಲಾಗದಷ್ಟು ಹೆಚ್ಚಿನ ಸಾಲದ ಸುಳಿಗೆ ಸಿಲುಕಿದೆ ಎಂದೇ ಅರ್ಥ.
ಬಿಆರ್ಐ ಮೂಲಕ ತನ್ನ ದೇಶದ ಮಾನದಂಡಗಳು, ರೂಢಿಗಳು ಮತ್ತು ಗುಣಲಕ್ಷಣಗಳೊಂದಿಗೆ ಜಗತ್ತಿನಾದ್ಯಂತ ಪ್ರಭಾವ ಬೀರಲು ಚೀನಾ ಯತ್ನಿಸುತ್ತಿದೆ. ಚೀನಾದಿಂದ ಸಾಲ ಪಡೆದ ದೇಶಗಳ ಚೀನಾ ಮೇಲಿನ ಅವಲಂಬನೆ ಮತ್ತೂ ಜಾಸ್ತಿಯಾಗುತ್ತದೆ ಎಂದು ಮಾಜಿ ಪರಿಸರ ಸಚಿವ ಮತ್ತು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯ ಜೋ ಲೀನೆನ್ ಯುರೋಪ್ ಏಷ್ಯಾ ಫೌಂಡೇಶನ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಮಾರು 60 ಅತಿ ಬಡರಾಷ್ಟ್ರಗಳು ತಮ್ಮ ಹಣಕಾಸು ಬಾಧ್ಯತೆಗಳನ್ನು ನಿಭಾಯಿಸಲಾಗದೇ ಕಷ್ಟಪಡುತ್ತಿದ್ದು, ಇವು ಚೀನಾ ಸಾಲದ ಸುಳಿಗೆ ಸಿಲುಕಿವೆ. ಇಂಥ ಪರಿಸ್ಥಿತಿಯಿಂದ ಈ ದೇಶಗಳನ್ನು ಹೇಗೆ ಪಾರು ಮಾಡಬೇಕು ಎಂದು ಚಿಂತಿಸುತ್ತಿರುವ ಅಂತಾರಾಷ್ಟ್ರೀಯ ಸಮುದಾಯಕ್ಕೆ ಈಗ ಚೀನಾ ಕುತಂತ್ರದ ಬಗ್ಗೆ ಕಳವಳ ಶುರುವಾಗಿದೆ.
ಮಧ್ಯ ಏಷ್ಯಾದಲ್ಲಿ ಸಾಲ ನೀಡುವ ಚೀನಾದ ಮೂರು ಸಾಲ ಸಂಸ್ಥೆಗಳೆಂದರೆ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ಚೀನಾದ ರಫ್ತು-ಆಮದು ಬ್ಯಾಂಕ್ ಮತ್ತು ಚೀನಾ ಡೆವಲಪ್ಮೆಂಟ್ ಬ್ಯಾಂಕ್. ಬೀಜಿಂಗ್ ಶ್ರೀಲಂಕಾದ ಅತಿದೊಡ್ಡ ಸಾಲಗಾರನಾಗಿದ್ದು, ದೇಶದ ವಿದೇಶಿ ಸಾಲದ ಸುಮಾರು 10 ಪ್ರತಿಶತವನ್ನು ಹೊಂದಿದೆ.
ಇದನ್ನು ಓದಿ:ಹೆಡ್ಫೋನ್ ಹಾಕಿಕೊಳ್ಳಲು ಪರದಾಡಿದ ಪಾಕ್ ಪ್ರಧಾನಿ; ಮುಸಿನಕ್ಕ ರಷ್ಯಾಧ್ಯಕ್ಷ ಪುಟಿನ್