ಹಾಂಗ್ ಕಾಂಗ್ : ತನ್ನ ದೇಶದಲ್ಲಿ ಹೆಚ್ಚಿನ ಬಂಡವಾಳ ಹೂಡುವಂತೆ ಚೀನಾ ಪಾಶ್ಚಿಮಾತ್ಯ ಕಂಪನಿಗಳನ್ನು ಓಲೈಸಲು ಮುಂದಾಗಿದೆ. ಹೆಚ್ಚಿನ ಹಣಕಾಸು ನೆರವಿನ ಭರವಸೆ ಮತ್ತು ಹೆಚ್ಚು ಸ್ವಾಗತಾರ್ಹ ವಾತಾವರಣ ಕಲ್ಪಿಸುವುದಾಗಿ ಚೀನಾ ಪಾಶ್ಚಿಮಾತ್ಯ ಕಂಪನಿಗಳಿಗೆ ಭರವಸೆ ನೀಡುತ್ತಿದೆ. ಹೆಚ್ಚುತ್ತಿರುವ ಆರ್ಥಿಕ ಸವಾಲುಗಳ ಮಧ್ಯೆ ಚೀನಾದಲ್ಲಿ ವಿದೇಶಿ ಬಂಡವಾಳ ಹೂಡಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಕಳವಳಗೊಂಡಿರುವ ಚೀನಾ ಮತ್ತೆ ಬಂಡವಾಳ ಹೂಡಿಕೆಯನ್ನು ತರಲು ಹರಸಾಹಸ ಮಾಡುತ್ತಿದೆ.
ದೇಶದಲ್ಲಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ನಿಟ್ಟಿನಲ್ಲಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಸಿ) ಗವರ್ನರ್ ಮತ್ತು ದೇಶದ ವಿದೇಶಿ ವಿನಿಮಯ ನಿಯಂತ್ರಕದ ಮುಖ್ಯಸ್ಥ ಪಾನ್ ಗಾಂಗ್ಶೆಂಗ್ ಅವರು ಇತ್ತೀಚೆಗೆ ಹಲವಾರು ವಿದೇಶಿ ಕಂಪನಿಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಜೆಪಿ ಮೋರ್ಗನ್, ಟೆಸ್ಲಾ, ಎಚ್ಎಸ್ಬಿಸಿ, ಡಾಯ್ಚ ಬ್ಯಾಂಕ್, ಬಿಎನ್ಪಿ ಪರಿಬಾಸ್, ಜಪಾನ್ನ ಎಂಯುಎಫ್ಜಿ ಬ್ಯಾಂಕ್, ಜರ್ಮನ್ ರಾಸಾಯನಿಕ ಉತ್ಪಾದಕ ಬಿಎಎಸ್ಎಫ್, ಸರಕುಗಳ ವ್ಯಾಪಾರಿ ಟ್ರಾಫಿಗುರಾ ಮತ್ತು ಷ್ನೇಯ್ಡರ್ ಎಲೆಕ್ಟ್ರಿಕ್ ಸೇರಿದಂತೆ ವಿದೇಶಿ ಕಂಪನಿಗಳ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ವಿದೇಶಿ ವ್ಯಾಪಾರ ಮತ್ತು ವಿದೇಶಿ ಹೂಡಿಕೆಯನ್ನು ಸ್ಥಿರಗೊಳಿಸುವುದು, ವಿದೇಶಿ ವ್ಯವಹಾರಕ್ಕಾಗಿ ಹೂಡಿಕೆ ವಾತಾವರಣವನ್ನು ಸುಧಾರಿಸುವುದು ಈ ವಿಚಾರ ಸಂಕಿರಣದ ಉದ್ದೇಶವಾಗಿದೆ ಎಂದು ಚೀನಾ ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ದುರ್ಬಲ ದೇಶೀಯ ಬೇಡಿಕೆ ಮತ್ತು ವಸತಿ ಬಿಕ್ಕಟ್ಟಿನಿಂದ ಹೆಚ್ಚಾಗುತ್ತಿರುವ ಆರ್ಥಿಕ ಹಿಂಜರಿತ, ಆರ್ಥಿಕ ಬೆಳವಣಿಗೆಗಿಂತ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವ ಬೀಜಿಂಗ್ನ ಧೋರಣೆ, ಚೀನಾ ಮತ್ತು ಅನೇಕ ಪಾಶ್ಚಿಮಾತ್ಯ ದೇಶಗಳ ನಡುವಿನ ಹದಗೆಡುತ್ತಿರುವ ಸಂಬಂಧಗಳು ಸೇರಿದಂತೆ ಚೀನಾ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರು ಆತಂಕಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಚೀನಾದಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಶೇಕಡಾ 5.1 ರಷ್ಟು ಕುಸಿದಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ವರದಿಗಳು ಬಹಿರಂಪಡಿಸಿವಿಎ. ಈ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಕೇವಲ 0.8% ರಷ್ಟು ಬೆಳೆದಿದೆ ಮತ್ತು ಯೋಜಿತ ವಾರ್ಷಿಕ ಬೆಳವಣಿಗೆಯು ಈಗ 3% ಕ್ಕೆ ಹತ್ತಿರದಲ್ಲಿದೆ.
ಇದನ್ನೂ ಓದಿ : ಅಧಿಕಾರ ಸಿಕ್ಕರೆ H-1B ವೀಸಾ ವ್ಯವಸ್ಥೆ ಬದಲಾಯಿಸುವೆ; ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ರಾಮಸ್ವಾಮಿ