ಟೊರೊಂಟೊ (ಕೆನಡಾ): ಕೆನಡಾದ ಬ್ರಾಂಪ್ಟನ್ನಲ್ಲಿರುವ ಶ್ರೀ ಭಗವದ್ಗೀತಾ ಪಾರ್ಕ್ನಲ್ಲಿನ ಮೂರ್ತಿಗಳನ್ನು ಧ್ವಂಸ ಮಾಡಿರುವುದರ ಹಿಂದೆ ಖಲಿಸ್ತಾನಿ ಉಗ್ರವಾದಿಗಳ ಕೈವಾಡವಿದೆ ಎಂದು ಕೆನಡಾದಲ್ಲಿ ಮಾಜಿ ಭಾರತೀಯ ಉಪರಾಯಭಾರಿಯಾಗಿದ್ದ ನೀರಜ್ ಶ್ರೀವಾಸ್ತವ ಆರೋಪಿಸಿದ್ದು, ಈ ಮುಂಚೆಯೂ ಕೆನಡಾದಲ್ಲಿ ಇಂಥ ಘಟನೆಗಳು ನಡೆದಿವೆ ಎಂದಿದ್ದಾರೆ.
ಕೆನಡಾದಲ್ಲಿ ಇಂಥ ದ್ವೇಷಾಪರಾಧ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಸೆಪ್ಟೆಂಬರ್ 15ರಂದು ಟೊರೊಂಟೊದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ವಿರೂಪಗೊಳಿಸಲಾಗಿತ್ತು. ಅಲ್ಲಿ ಖಲಿಸ್ತಾನ್ ಘೋಷಣೆಗಳು ಮತ್ತು ಗೀಚು ಬರಹಗಳನ್ನು ಚಿತ್ರಿಸಲಾಗಿದೆ. ಕೆನಡಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಅಪರಾಧ ತಡೆಗಟ್ಟುವಂತೆ ಮತ್ತು ಪೂಜಾ ಸ್ಥಳಗಳನ್ನು ರಕ್ಷಿಸುವಂತೆ ಭಾರತ ಸರ್ಕಾರ ಕೆನಡಾಕ್ಕೆ ಬಲವಾಗಿ ಆಗ್ರಹಿಸಿತ್ತು. ಈ ಬಾರಿಯೂ ಇದು ಖಲಿಸ್ತಾನಿ ಭಯೋತ್ಪಾದಕರ ಕೆಲಸ ಎಂದು ಕಣಿಸುತ್ತಿದೆ ಎಂದು ಮಾಜಿ ಉಪ ರಾಯಭಾರಿ ಹೇಳಿದರು.
ಕೆನಡಾ ಸರ್ಕಾರವು ಆರೋಪಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಮತ್ತು ಅವರನ್ನು ಶಿಕ್ಷಿಸುತ್ತದೆ. ಭವಿಷ್ಯದಲ್ಲಿ ಇಂತಹ ದ್ವೇಷದ ಅಪರಾಧಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಶ್ರೀವಾಸ್ತವ ಹೇಳಿದರು.
ಶನಿವಾರ ಭಗವದ್ಗೀತೆ ಪಾರ್ಕ್ನಲ್ಲಿರುವ ಫಲಕವನ್ನು ಧ್ವಂಸಗೊಳಿಸಲಾಗಿದೆ. ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಪಾರ್ಕ್ನಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ದೃಢಪಡಿಸಿದ್ದು, ಕೆನಡಾ ಇಂಥ ದಾಳಿಗಳ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಹೇಳಿದರು.
ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್ ಫಲಕವನ್ನು ಧ್ವಂಸಗೊಳಿಸಲಾಗಿದೆ ಎಂದು ನಮಗೆ ತಿಳಿದಿದೆ. ಈ ವಿಷಯದಲ್ಲಿ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಹೆಚ್ಚಿನ ತನಿಖೆಗಾಗಿ ನಾವು ಪೀಲ್ ಪ್ರಾದೇಶಿಕ ಪೊಲೀಸರನ್ನು ನೇಮಿಸಿದ್ದೇವೆ. ನಮ್ಮ ಉದ್ಯಾನವನ ಇಲಾಖೆಯು ಚಿಹ್ನೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದು ಬ್ರೌನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಖಲಿಸ್ತಾನ್ ಚಳವಳಿಗೆ ಗೊಬ್ಬರ ಹಾಕಿದ್ದು ಕಾಂಗ್ರೆಸ್, ಬಲಿಯಾಗಿದ್ದು ಇಂದಿರಾಗಾಂಧಿ: ಸಿ.ಟಿ.ರವಿ