ಲಂಡನ್, ಬ್ರಿಟನ್: ಇದೀಗ ಲಿಜ್ ಟ್ರಸ್ ರಾಜೀನಾಮೆ ಬಳಿಕ ಬ್ರಿಟನ್ ಮತ್ತೆ ಅದೇ ಕವಲುದಾರಿಯಲ್ಲಿ ನಿಂತಿದ್ದು, ಮುಂದಿನ ಪ್ರಧಾನಿ ಯಾರು ಎಂಬುದೇ ಅದರ ಮುಂದಿರುವ ಪ್ರಶ್ನೆ. ಪ್ರಸ್ತುತ, ಭಾರತೀಯ ಮೂಲದ ರಿಷಿ ಸುನಕ್ ಮತ್ತೆ ಯುಕೆ ಪ್ರಧಾನಿಯಾಗುವ ರೇಸ್‌ನಲ್ಲಿದ್ದಾರೆ. ಲಿಜ್ ಟ್ರಸ್ ಅವರ ರಾಜೀನಾಮೆಯು ಸುನಕ್‌ಗೆ ಸುವರ್ಣಾವಕಾಶದಂತಿರಬಹುದು. ಆದರೆ, ಅವರ ಹಾದಿಯು ಅವರಿಗೆ ಅಷ್ಟೊಂದು ಸುಲಭವಾಗಿಲ್ಲ. ಏಕೆಂದರೆ ಅವರ ಜೊತೆಗೆ ಕನ್ಸರ್ವೇಟಿವ್ ಪಕ್ಷದ ಇತರ ಹಲವು ಮುಖಗಳೂ ಈ ರೇಸ್‌ನಲ್ಲಿದ್ದಾರೆ.
ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಪ್ರಧಾನಿ ಓಟದಲ್ಲಿ ಹಲವು ಮುಖಗಳಿವೆ. ಮೊದಲ ಹೆಸರು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರದ್ದು. ಇದಾದ ಬಳಿಕ ಭಾರತೀಯ ಮೂಲದ ರಿಷಿ ಸುನಕ್‌ಗೆ ಚಾನ್ಸ್ ಇದೆ. ಇದಲ್ಲದೇ ಪೆನ್ನಿ ಮೊರ್ಡಾಂಟ್ ಕೂಡ ಈ ರೇಸ್‌ನಲ್ಲಿದ್ದಾರೆ. ಲಿಜ್ ಟ್ರಸ್ ಆಯ್ಕೆಯಾದಾಗ ಅವರು ಪ್ರಧಾನಮಂತ್ರಿ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇವರ ಹೊರತಾಗಿ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ಕೆಮಿ ಬಡೆನೋಚ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಮತ್ತು ಇತ್ತೀಚೆಗೆ ರಾಜೀನಾಮೆ ನೀಡಿದ ಸುಯೆಲ್ಲಾ ಬ್ರಾವರ್‌ಮನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಹಣಕಾಸು ಸಚಿವ ಜೆರೆಮಿ ಹಂಟ್ ಹೆಸರೂ ಕೂಡಾ ಇದೆ. ಆದರೆ ಲಿಜ್ ಟ್ರಸ್ ರಾಜೀನಾಮೆ ನೀಡಿದ ನಂತರ ತಾನು ಇನ್ನು ಮುಂದೆ ಪ್ರಧಾನಿಯಾಗುವ ಹಕ್ಕು ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟಾಮ್ ತುಗೆಂಧತ್ ಮತ್ತು ಮೈಕೆಲ್ ಗೋವ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಗಮನಾರ್ಹ.
ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ 7 ಹೆಸರುಗಳಿವೆ. ಆದರೆ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಿಲ್ಲುವುದು ಕಷ್ಟ. ವಾಸ್ತವವಾಗಿ, ಬ್ರಿಟಿಷ್ ಸಂಸತ್ತಿನಲ್ಲಿ ಒಟ್ಟು 357 ಟೋರಿ ಸಂಸದರು (ಕನ್ಸರ್ವೇಟಿವ್ ಪಕ್ಷದ ಸಂಸದರು) ಇದ್ದಾರೆ. ಮತ ಪತ್ರವನ್ನು ಸ್ವೀಕರಿಸಲು ಅಭ್ಯರ್ಥಿಗೆ ಸುಮಾರು 100 ಟೋರಿ ಸಂಸದರ ಬೆಂಬಲ ಬೇಕಾಗುತ್ತದೆ. ಈ ರೀತಿಯಾಗಿ ಅಭ್ಯರ್ಥಿಗಳ ಸಂಖ್ಯೆ ಮೂರನ್ನು ಮೀರುವಂತಿಲ್ಲ.
ಭಾರತ ಮೂಲದ ರಿಷಿ ಸುನಕ್‌ಗೆ ಚಾನ್ಸ್: ಟ್ರಸ್ ರಾಜೀನಾಮೆ ನಂತರ ಮಾಜಿ ಚಾನ್ಸೆಲರ್ ರಿಷಿ ಸುನಕ್ ಮತ್ತೆ ಬ್ರಿಟನ್‌ನ ಪ್ರಧಾನಿಯಾಗುವ ಅವಕಾಶವನ್ನು ಹೊಂದಿದ್ದಾರೆ. ಭಾರತೀಯ ಮೂಲದ ಸುನಕ್ ಅವರು ಪ್ರಸಿದ್ಧ ಐಟಿ ಕಂಪನಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ಅವರು ಬ್ರಿಟನ್‌ನ ಹಣಕಾಸು ಸಚಿವರೂ ಆಗಿದ್ದಾರೆ. 2015ರಲ್ಲಿ ರಿಷಿ ಸುನಕ್ ಮೊದಲ ಬಾರಿಗೆ ಸಂಸದರಾದಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು. ರಿಷಿ ಸುನಕ್ ಗೆದ್ದರೆ, ಅವರು ಯುಕೆ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುತ್ತಾರೆ. ಇದು ಐತಿಹಾಸಿಕ ಕ್ಷಣವಾಗಿದೆ.
ಕೆಲವು ತಿಂಗಳ ಹಿಂದೆ ಬೋರಿಸ್ ಜಾನ್ಸನ್ ರಾಜೀನಾಮೆ ನಂತರ ಕನ್ಸರ್ವೇಟಿವ್ ಪಕ್ಷದಿಂದ ಯಾರಾದ್ರೂ ಪ್ರಧಾನಿಯಾಗಿ ಆಯ್ಕೆಯಾಗಬೇಕಿತ್ತು. ಹೀಗಾಗಿ ಲಿಜ್ ಟ್ರಸ್ ಪ್ರಧಾನಿಯಾದರು. ಪ್ರಧಾನಿ ರೇಸ್‌ನಲ್ಲಿ ರಿಷಿ ಸುನಕ್ ಎರಡನೇ ಸ್ಥಾನದಲ್ಲಿದ್ದರು. ಈಗ ಲಿಜ್ ಟ್ರಸ್ ರಾಜೀನಾಮೆ ನಂತರ ರಿಷಿ ಸುನಕ್ ಮತ್ತೆ ಪ್ರಧಾನಿಯಾಗುವ ಸಾಧ್ಯತೆಗಳು ಬಲವಾಗಿವೆ. ಸುನಕ್ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಯುಕೆ ಆರ್ಥಿಕತೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂಬ ಪ್ಲಸ್ ಪಾಯಿಂಟ್ ಹೊಂದಿದ್ದಾರೆ. ಆದರೆ ಅವರ ಮುಂದೆ ದೊಡ್ಡ ಸವಾಲೂ ಇದೆ. ಸುನಕ್ ಅವರು ಬೋರಿಸ್ ಜಾನ್ಸನ್‌ಗೆ ದ್ರೋಹ ಬಗೆದಿದ್ದಾರೆ ಎಂದು ಪಕ್ಷದ ಸದಸ್ಯರು ನಂಬುತ್ತಿದ್ದಾರೆ.
ಬೋರಿಸ್ ಜಾನ್ಸನ್: ಲಿಜ್ ಟ್ರಸ್ ಅವರು ಕುರ್ಚಿಯನ್ನು ತೊರೆದ ನಂತರ ಬೋರಿಸ್ ಜಾನ್ಸನ್ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಬೋರಿಸ್ ಜಾನ್ಸನ್ ಅವರು ಪ್ರಧಾನಿ ರೇಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆಂದು ಸಾರ್ವಜನಿಕವಾಗಿ ಘೋಷಿಸಿಲ್ಲ,
ಪ್ರಧಾನಿ ಪೈಪೋಟಿಯಲ್ಲಿ ಪೆನ್ನಿ ಮೊರ್ಡೆಂಟ್: ಮೊರ್ಡೆಂಟ್ ಪ್ರಸ್ತುತ ಬ್ರಿಟಿಷ್ ಕ್ಯಾಬಿನೆಟ್ ಸದಸ್ಯರಾಗಿದ್ದಾರೆ. ರನ್-ಆಫ್‌ನಲ್ಲಿ ಟ್ರಸ್‌ಗೆ ಮೊರ್ಡೆಂಟ್ ಕಠಿಣ ಹೋರಾಟ ನೀಡಿದ್ದರು. ಮಾಜಿ ರಕ್ಷಣಾ ಮತ್ತು ವ್ಯಾಪಾರ ಸಚಿವರು ತಳಮಟ್ಟದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. 2016 ರಲ್ಲಿ, ಅವರು ಬ್ರೆಕ್ಸಿಟ್ ಅನ್ನು ಬಲವಾಗಿ ಬೆಂಬಲಿಸಿದರು. ಅವರು ಇತ್ತೀಚಿನ ನಾಯಕತ್ವದ ಓಟದಲ್ಲಿ ಕನ್ಸರ್ವೇಟಿವ್ ಸದಸ್ಯರಿಂದ ಟೀಕೆಗಳನ್ನೂ ಸಹ ಎದುರಿಸಬೇಕಾಯಿತು. ಟ್ರಸ್ ಹುದ್ದೆ ತೊರೆದ ಬಳಿಕ ಅವರ ಹೆಸರು ಮತ್ತೆ ಚರ್ಚೆಗೆ ಬಂದಿದೆ.
ಬೆನ್ ವ್ಯಾಲೇಸ್: ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಈ ಬಾರಿ ಪ್ರಧಾನಿಯಾಗಲು ಹಕ್ಕು ಮಂಡಿಸಬಹುದು. ಲಿಜ್ ಟ್ರಸ್ ಆಯ್ಕೆಯಾದ ನಂತರದ ಸ್ಪರ್ಧೆಯಲ್ಲಿ, ವ್ಯಾಲೇಸ್ ಹಕ್ಕು ಸಲ್ಲಿಸಲಿಲ್ಲ. ವ್ಯಾಲೇಸ್ ಅವರು ಸ್ಕಾಟ್ಸ್ ಗಾರ್ಡ್ ಪದಾತಿ ಸೈನಿಕ, ಸ್ಕಾಟಿಷ್ ಸಂಸತ್ತಿನ ಸದಸ್ಯರೂ ಆಗಿದ್ದಾರೆ.
ಸುಯೆಲ್ಲಾ ಬ್ರಾವರ್‌ಮನ್: ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್ ಬ್ರಿಟನ್‌ನ ಗೃಹ ಸಚಿವರಾಗಿದ್ದರು. ಅವರು ಅಕ್ಟೋಬರ್ 19 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬ್ರಿಟನ್‌ಗೆ ಭಾರತೀಯ ಮೂಲದವರಾಗಿರುವುದರಿಂದ ಹೆಚ್ಚುತ್ತಿರುವ ವಲಸಿಗರು, ವಿಶೇಷವಾಗಿ ಭಾರತೀಯ ವಲಸಿಗರು ಹೆಚ್ಚುತ್ತಿರುವುದನ್ನು ಸುಯೆಲ್ಲಾ ಬ್ರೇವರ್‌ಮನ್ ವಿರೋಧಿಸಿದ್ದರು. ಈ ಬಗ್ಗೆ ಸಾಕಷ್ಟು ಗದ್ದಲ ಕೂಡಾ ಎದ್ದಿತ್ತು.
ಓದಿ: ಲಿಜ್ ಟ್ರಸ್ ರಾಜೀನಾಮೆ: ಯಾರಾಗ್ತಾರೆ ಬ್ರಿಟನ್ ಪ್ರಧಾನಿ?.. ಇನ್ನೂ ಏನನ್ನೂ ಹೇಳದ ರಿಷಿ!