ವಾಷಿಂಗ್ಟನ್ : ತಾವು ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವುದಾಗಿ ಜೋ ಬೈಡನ್ ಘೋಷಿಸಿದ್ದಾರೆ. ಇವರ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಕೂಡ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮುಂದಿನ ವರ್ಷಗಳಲ್ಲಿ ನಮಗೆ ಹೆಚ್ಚು ಸ್ವಾತಂತ್ರ್ಯವಿರಲಿದೆಯೇ ಅಥವಾ ಕಡಿಮೆ ಸ್ವಾತಂತ್ರ್ಯ ಇರಲಿದೆಯೇ, ಹೆಚ್ಚಿನ ಹಕ್ಕು ಸಿಗಲಿವೆಯೇ ಅಥವಾ ಹಕ್ಕುಗಳು ಕಡಿಮೆಯಾಗಲಿವೆಯೇ ಎಂಬುದು ಈಗ ನಾವು ಎದುರಿಸುತ್ತಿರುವ ಪ್ರಶ್ನೆಯಾಗಿದೆ ಎಂದು ಬೈಡನ್ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏನು ಉತ್ತರ ನೀಡಬೇಕೆಂಬುದನ್ನು ನನಗೆ ತಿಳಿದಿದೆ. ಇದು ಸಮಾಧಾನಪಡುವ ಸಮಯವಲ್ಲ. ಅದಕ್ಕಾಗಿಯೇ ನಾನು ಮರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಬೈಡನ್ ಹೇಳಿದ್ದಾರೆ.
80 ರ ಹರೆಯದ ಬೈಡನ್ ಅವರು ಈಗಾಗಲೇ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವಯಸ್ಸಾದ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಎರಡನೇ ಅವಧಿಯ ಕೊನೆಯಲ್ಲಿ ಅವರು 86 ವರ್ಷ ವಯಸ್ಸಿನವರಾಗಲಿದ್ದಾರೆ. ಅಷ್ಟೊಂದು ಹಿರಿಯರಾದ ಅವರು ಮತ್ತೊಮ್ಮೆ ಅಧ್ಯಕ್ಷರಾಗುವುದು ಎಷ್ಟು ಸೂಕ್ತ ಎಮದು ಅವರದೇ ಪಕ್ಷ ಡೆಮಾಕ್ರಟಿಕ್ ಪಕ್ಷದವರೂ ಪ್ರಶ್ನಿಸುತ್ತಿದ್ದಾರೆ. ಆದರೆ ಬೈಡನ್ ಎರಡನೇ ಬಾರಿಗೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮತದಾರರು ಅವರ ಪರವಾಗಿ ರ‍್ಯಾಲಿ ಮಾಡುತ್ತಿದ್ದಾರೆ.
ನವೆಂಬರ್ 2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಡೆನ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮರ್ಥವಾಗಿ ಎದುರಿಸಬಹುದು. ಪ್ರೈಮರಿ ಚುನಾವಣೆಗೆ ರಿಪಬ್ಲಿಕನ್ ಲೈನ್-ಅಪ್ ಇನ್ನೂ ರೂಪುಗೊಳ್ಳುತ್ತಿದ್ದರೂ, ಟ್ರಂಪ್ ಅವರು ತಮ್ಮ ಪ್ರತಿಸ್ಪರ್ಧಿಗಳು ಮತ್ತು ಸಂಭಾವ್ಯ ಪ್ರತಿಸ್ಪರ್ಧಿಗಳನ್ನು ವ್ಯಾಪಕ ಅಂತರದಿಂದ ಹಿಮ್ಮೆಟ್ಟಿಸುವ ಮೂಲಕ ನೆಚ್ಚಿನ ಪ್ರತಿಸ್ಪರ್ಧಿಯಾಗಿದ್ದಾರೆ.
ಭಾರತೀಯ ಮೂಲದ, ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಕೂಡ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಆಕಾಂಕ್ಷಿಗಳ ಪೈಕಿ ಒಬ್ಬರಾಗಿದ್ದಾರೆ. ಆದರೆ ಅವರು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಫ್ಲೋರಿಡಾ ಗವರ್ನರ್ ಆಗಿರುವ ರಾನ್ ಡೆ ಸ್ಯಾಂಟಿಸ್ ಇನ್ನೂ ತಮ್ಮ ನಿರ್ಧಾರವನ್ನು ತಿಳಿಸಿಲ್ಲವಾದರೂ, ಒಂದೊಮ್ಮೆ ಅವರು ಬಯಸಿದರೆ ಟ್ರಂಪ್ಗೆ ಪ್ರಬಲ ಎದುರಾಳಿಯಾಗಬಹುದು.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕಳೆದ ತಿಂಗಳು ಉಕ್ರೇನ್‌ನ ಕೈವ್ ನಗರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದರು. ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ ಆರಂಭಿಸಿ ಒಂದು ವರ್ಷದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಕೈವ್‌ಗೆ ಅಚ್ಚರಿಯ ಭೇಟಿ ನೀಡಿದ್ದನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಬೈಡನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಉಕ್ರೇನಿಯನ್ ರಾಜಧಾನಿಯಲ್ಲಿ ಭೇಟಿಯಾಗಿದ್ದರು. ಯುದ್ಧ ಪ್ರಾರಂಭದ ನಂತರ ಉಕ್ರೇನ್‌ಗೆ ಇದು ಅವರ ಮೊದಲ ಭೇಟಿಯಾಗಿದೆ.
ಉಕ್ರೇನ್‌ಗೆ 500 ಮಿಲಿಯನ್ ಡಾಲರ್ ಸಹಾಯ ನೀಡುವುದಾಗಿ ಇದೇ ಸಂದರ್ಭದಲ್ಲಿ ಬೈಡನ್ ಘೋಷಿಸಿದರು. ಜಾವೆಲಿನ್‌ಗಳು, ಹೊವಿಟ್ಜರ್‌ಗಳು ಮತ್ತು ಫಿರಂಗಿ ಮದ್ದುಗುಂಡುಗಳನ್ನು ಕೂಡ ಉಕ್ರೇನ್‌ಗೆ ಅಮೆರಿಕ ಪೂರೈಸಲಿದೆ. ರಷ್ಯಾವನ್ನು ಬೆಂಬಲಿಸಲು ಪ್ರಯತ್ನಿಸುತ್ತಿರುವ ಕಂಪನಿಗಳ ವಿರುದ್ಧ ನಾವು ಹೆಚ್ಚುವರಿ ನಿರ್ಬಂಧಗಳನ್ನು ಘೋಷಿಸುತ್ತೇವೆ ಎಂದು ಕೈವ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು.
ಇದನ್ನೂ ಓದಿ : ಸುಡಾನ್ ಸಂಘರ್ಷ: 413 ಸಾವು, 3,551ಕ್ಕೂ ಹೆಚ್ಚು ಜನರಿಗೆ ಗಾಯ