ದೇರ್ ಅಲ್-ಬಾಲಾಹ್ : ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಾಳಿ ನಿಲ್ಲುವ ಸೂಚನೆಗಳು ಕಂಡುಬರುತ್ತಿಲ್ಲ. ಇದೀಗ, ಗಾಜಾದ ದೇರ್ ಅಲ್ ಬಾಲಾಹ್‌ನ ಪೂರ್ವದಲ್ಲಿರುವ ಮಘಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಭಾನುವಾರ ಕನಿಷ್ಠ 60 ಮಂದಿ ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನೊಂದೆಡೆ, ಗಾಜಾಪಟ್ಟಿಯಲ್ಲಿ ಶುಕ್ರವಾರ ಮತ್ತು ಶನಿವಾರ (ವಾರಾಂತ್ಯದಲ್ಲಿ) ಇಸ್ರೇಲ್ ಸೇನೆಯ 15 ಯೋಧರನ್ನು ಹಮಾಸ್ ಬಂಡುಕೋರರು ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ ಹಿನ್ನೆಲೆ ಇಸ್ರೇಲ್ ಪ್ರತಿದಾಳಿ ಮಾಡಿದ್ದು, ಕ್ರಿಸ್ಮಸ್ ಸಂಭ್ರಮಾಚರಣೆ ಬೆನ್ನಲ್ಲೇ ಗಾಜಾದಲ್ಲಿ ಡಜನ್‌ಗಟ್ಟಲೇ ಜನರು ಕೊಲ್ಲಲ್ಪಟ್ಟಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಕಿದ್ರಾ ಅವರು, ಮಘಜಿ ನಿರಾಶ್ರಿತರ ಶಿಬಿರದ ಮೇಲಿನ ದಾಳಿಯಿಂದ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸ್ಥಳದಲ್ಲಿದ್ದ ಎಪಿ ವರದಿಗಾರ ಮಕ್ಕಳು ಸೇರಿದಂತೆ ಮೃತದೇಹಗಳು ಮತ್ತು ಗಾಯಾಳುಗಳನ್ನು ಒಯ್ಯುತ್ತಿರುವುದನ್ನು ವೀಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇಸ್ರೇಲ್ - ಹಮಾಸ್ ಬಂಡುಕೋರರ ನಡುವಿನ ಯುದ್ಧದಲ್ಲಿ ಈವರೆಗೆ 154 ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಹಮಾಸ್ ನೇತೃತ್ವದ ಉಗ್ರಗಾಮಿಗಳು ಕಳೆದ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ಮಾಡಿ 1,200 ಜನರನ್ನು ಕೊಂದು, 240 ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡ ಹಿನ್ನೆಲೆ ಯುದ್ಧ ಪ್ರಾರಂಭವಾಗಿದೆ. ಯುದ್ಧದಿಂದ ಗಾಜಾದ ಬಹುತೇಕ ಭಾಗಗಳು ಧ್ವಂಸಗೊಂಡಿವೆ. ಘಟನೆಯಿಂದ ಸರಿಸುಮಾರು 20,400 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. ಬಹುತೇಕ ಎಲ್ಲಾ ಪ್ರದೇಶದ 2.3 ಮಿಲಿಯನ್ ಜನರನ್ನು ಸ್ಥಳಾಂತರಿಸಿದೆ.
ಇನ್ನು ಅಮೆರಿಕ, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ವಿವಿಧ ಯುರೋಪಿಯನ್ ದೇಶಗಳು ಹಮಾಸ್ ದಾಳಿಯನ್ನು ಖಂಡಿಸಿವೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಧಿಕಾರ ಹೊಂದಿದೆ ಎಂದು ಅವು ಹೇಳಿವೆ. ಇನ್ನೊಂದೆಡೆ, ಮುಸ್ಲಿಂ ದೇಶಗಳು ಪ್ಯಾಲೆಸ್ಟೀನಿಯರನ್ನು ಬೆಂಬಲಿಸಿವೆ. ಹಿಂಸಾಚಾರದ ಹೆಚ್ಚಳಕ್ಕೆ ಪ್ಯಾಲೆಸ್ಟೀನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದೇ ಕಾರಣವಾಗಿದೆ, ಸಂಘರ್ಷಕ್ಕೆ ಇದೇ ಮೂಲ ಕಾರಣ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ಹಮಾಸ್ ದಾಳಿ, ಇಸ್ರೇಲ್ ಯುದ್ಧ - ಸಾವಿರಾರು ಸಾವು ; ಕರಾಳ ಘಟನೆಗಳಿಗೆ ಸಾಕ್ಷಿಯಾದ 2023ರ ವರ್ಷ