ಸ್ಯಾನ್ಫ್ರಾನ್ಸಿಸ್ಕೊ: ಭಾರತದ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಚೀನಾಗೆ ಅಮೆರಿಕ ಇದೀಗ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿ ತಿಂಗಳ ಬಳಿಕ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ತಿಳಿಸಿದೆ. ಈ ಸಂಬಂಧ ಕಾಂಗ್ರೆಷನಲ್ ಸೆನೆಟೋರಿಯಲ್ ಕಮಿಟಿ ನಿರ್ಣಯವನ್ನು ಅಂಗೀಕರಿಸಿದೆ. ಸೆನೆಟರ್ ಜೆಫ್ ಮೆರ್ಕ್ಲೇ, ಬಿಲ್ ಹಗೆರ್ಟೆ, ಟಿಮ್ ಕೈನೆ ಮತ್ತು ಕ್ರಿಸ್ ವ್ಯಾನ್ ಹೋಲೆನ್ ಗುರುವಾರ ನಿರ್ಣಯವನ್ನು ಮಂಡಿಸಿದರು.
ಗಡಿ ರೇಖೆ ಸ್ಪಷ್ಟ: ಈ ನಿರ್ಣಯವನ್ನು ಅಂಗೀಕರಿಸಿದ ಅಮೆರಿಕ, ಅರುಣಾಚಲ ಪ್ರದೇಶದಲ್ಲಿರುವ ಮ್ಯಾಕ್ ಮೋಹನ್ ರೇಖೆ ಭಾರತ ಮತ್ತು ಚೀನಾದ ಅಂತಾರಾಷ್ಟ್ರೀಯ ಗಡಿ ರೇಖೆ ಆಗಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಅರುಣಾಚಲದ ದೊಡ್ಡ ಭೂ ಪ್ರದೇಶ ಮತ್ತು ಪಿಆರ್ಸಿ ಭೂ ಪ್ರದೇಶವನ್ನು ತನ್ನದೆಂದು ವಾದಿಸುತ್ತಿದ್ದ ಚೀನಾಗೆ ವಾದವನ್ನು ಸರಿಗಟ್ಟಿದೆ.
ಈ ನಿರ್ಣಯ ಸೆನೆಟ್ ಮುಂದೆ ಮತ ಚಲಾವಣೆಗೆ ಬರಲಿದೆ. ಸ್ವಾತಂತ್ರ್ಯವನ್ನು ಬೆಂಬಲಿಸುವ ಅಮೆರಿಕ ಮೌಲ್ಯಗಳು ಮತ್ತು ನಿಯಮಗಳ ಆಧಾರಿತ ಆದೇಶವು ಪ್ರಪಂಚದಾದ್ಯಂತ ನಮ್ಮ ಎಲ್ಲಾ ಕ್ರಮಗಳು ಮತ್ತು ಸಂಬಂಧಗಳ ಕೇಂದ್ರದಲ್ಲಿರಬೇಕು. ವಿಶೇಷವಾಗಿ ಪಿಆರ್ಸಿ ಸರ್ಕಾರ ಪರ್ಯಾಯ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ ಎಂದು ಸೆನೆಟರ್ ಮರ್ಕಲೇ ತಿಳಿಸಿದರು.
ಭಾರತದ ಅವಿಭಾಜ್ಯ ಅಂಗ: ನಿರ್ಣಯದ ಸಮಿತಿಯೂ ಅರುಣಾಚಲ ಪ್ರದೇಶನ್ನು ಭಾರತದ ಗಣರಾಜ್ಯದ ಅಂಗವಾಗಿ ನೋಡುತ್ತದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವಾಗಿ ಅಲ್ಲ. ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಈ ಪ್ರದೇಶಕ್ಕೆ ಬೆಂಬಲ ಮತ್ತು ಸಹಾಯವನ್ನು ಗಾಢವಾಗಿಸಲು ಅಮೆರಿಕ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಹಂಚಿದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಅಮೆರಿಕ ಪ್ರಜಾಪ್ರಭುತ್ವ ರಕ್ಷಣೆಗೆ ನಿಲ್ಲಬೇಕಿದ್ದು, ಮುಕ್ತ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸಬೇಕಿದೆ ಎಂದು ಸೆನೆಟರ್ ಕಾರ್ನಿನ್ ತಿಳಿಸಿದರು. ಈ ನಿರ್ಣಯವು ಅರುಣಾಚಲ ಪ್ರದೇಶವನ್ನು ಭಾರತದ ಗಣರಾಜ್ಯದ ಭಾಗವಾಗಿ ಗುರುತಿಸಿದೆ. ಇದನ್ನು ತಡ ಮಾಡದೆ ಅಂಗೀಕರಿಸಲು ನನ್ನ ಸಹೋದ್ಯೋಗಿಗಳಿಗೆ ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಭಾರತದ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಅಕ್ರಮ ಪ್ರವೇಶ ನಡೆಸಿರುವ ಚೀನಾ, ಇಲ್ಲಿನ ದಕ್ಷಿಣ ಟೆಬೆಟ್ ಭಾಗ ಎಂದು ಗುರುತಿಸುವ ಅರುಣಾಚಲ ಪ್ರದೇಶದ 11 ಹಳ್ಳಿಗಳ ಹೆಸರುಗಳನ್ನು ಚೀನಾ ಮರು ನಾಮಕರಣಗೊಳಿಸಿತ್ತು. ಈ ಕುರಿತು ಕೂಡ ಪ್ರತಿಕ್ರಿಯಿಸಿರುವ ಅಮೆರಿಕ, ಇದು ಏಕಪಕ್ಷೀಯ ನಿರ್ಧಾರ ಎಂದು ಕೂಡ ಟೀಕಿಸಿದ್ದು, ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ವಾಸ್ತವಗಳು ಬದಲಾಗುವುದಿಲ್ಲ. ಚೀನಾದ ಈ ನಿರ್ಧಾರಗಳಿಗೆ ನಮ್ಮ ಬೆಂಬಲ ಇಲ್ಲ. ಅರುಣಾಚಲ ಪ್ರದೇಶ ಭಾರತದ ಅಂಗ ಎಂದು ಶ್ವೇತಭವನ ಕೂಡ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮದುವೆಗೆ ನೋ ಎನ್ನುತ್ತಿರುವ ಚೀನಾ ಯುವ ಜನತೆ; ಕಾರಣ ಇದು!