ಕಾಬೂಲ್ (ಅಫ್ಘಾನಿಸ್ತಾನ್) : ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ನಂತರ, ಅಲ್ಲಿದ್ದ ಅನೇಕ ಅಮೆರಿಕದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳು ಪಾಕಿಸ್ತಾನಕ್ಕೆ ರವಾನೆಯಾಗಿವೆ. ಪಾಕಿಸ್ತಾನದ ಸಶಸ್ತ್ರ ದಂಗೆಕೋರ ಗುಂಪುಗಳು ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ರಕ್ಷಣಾ ವಿಶ್ಲೇಷಕರು ಹೇಳಿದ್ದಾರೆ. ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳ ಪೂರೈಕೆಯಿಂದ ತೆಹ್ರಿಕ್ -ಎ- ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಭಯೋತ್ಪಾದಕ ಸಂಘಟನೆ ಮತ್ತು ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ದಂಗೆಗಳನ್ನು ನಡೆಸುತ್ತಿರುವ ಜನಾಂಗೀಯ ಬಲೂಚ್ ಪ್ರತ್ಯೇಕತಾವಾದಿ ಗುಂಪುಗಳ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಿದೆ ಎಂದು ವೀಕ್ಷಕರು ಹೇಳುತ್ತಾರೆ.
ಈ ಶಸ್ತ್ರಾಸ್ತ್ರಗಳು ಮೂಲಭೂತವಾದಿ ಗುಂಪುಗಳ ಮಾರಣಾಂತಿಕ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸಿವೆ ಎಂದು ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್‌ನ ಹಿರಿಯ ವಿಶ್ಲೇಷಕ ಅಸ್ಫಾಂಡ್ಯಾರ್ ಮೀರ್ ಹೇಳಿದರು. ಪಾಕಿಸ್ತಾನವು ಅಮೆರಿಕದ ಶಸ್ತ್ರಾಸ್ತ್ರಗಳ ಬ್ಲ್ಯಾಕ್ ಮಾರ್ಕೆಟ್ ಆಗಿ ಬೆಳೆಯುತ್ತಿದೆ ಎಂದು ಅವರು ತಿಳಿಸಿದರು. ಸಶಸ್ತ್ರ ಗುಂಪುಗಳು ಸುಧಾರಿತ ಯುಎಸ್ ಶಸ್ತ್ರಾಸ್ತ್ರಗಳು ಮತ್ತು M16 ಮೆಷಿನ್ ಗನ್‌ಗಳು, M4 ಅಸಾಲ್ಟ್ ರೈಫಲ್‌ಗಳು, ರಾತ್ರಿ ದೃಷ್ಟಿ ಕನ್ನಡಕಗಳು (night-vision goggles) ಮತ್ತು ಮಿಲಿಟರಿ ಸಂವಹನ ಸಾಧನಗಳನ್ನು ಪಡೆದುಕೊಂಡಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಟಿಟಿಪಿ ಬೆಳವಣಿಗೆಗಳ ಮೇಲೆ ನಿಗಾ ವಹಿಸುವ ಸ್ವೀಡನ್ ಮೂಲದ ಸಂಶೋಧಕ ಅಬ್ದುಲ್ ಸಯೀದ್, ಸಶಸ್ತ್ರ ಹೋರಾಟ ಗುಂಪುಗಳಿಗೆ ಅತ್ಯಾಧುನಿಕ ಯುದ್ಧ ಶಸ್ತ್ರಾಸ್ತ್ರಗಳ ಲಭ್ಯತೆಯು ಭಾರಿ ಅಪಾಯಕಾರಿ ಪರಿಣಾಮ ಉಂಟು ಮಾಡಬಹುದು. ಅದರಲ್ಲೂ ಕಡಿಮೆ ದರ್ಜೆಯ ಶಸ್ತ್ರಸಜ್ಜಿತ ಪಾಕಿಸ್ತಾನ ಪೊಲೀಸ್ ಪಡೆಗೆ ಇದು ಹೆಚ್ಚಿನ ಅಪಾಯ ಉಂಟು ಮಾಡಬಹುದು ಎಂದು ಹೇಳಿದರು.
ತೆಹ್ರೀಕ್ ಎ ತಾಲಿಬಾನ್ ಉಗ್ರವಾದಿ ಸಂಘಟನೆಯ ದಾಳಿಗೆ ಒಳಗಾಗಿದ್ದ ಖೈಬರ್ ಪಖ್ತುನಖ್ವಾ ಪ್ರದೇಶದಲ್ಲಿ ನಿಯೋಜನೆಯಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಬಗ್ಗೆ ಮಾತನಾಡಿ, ಉಗ್ರ ಸಂಘಟನೆಗಳ ವಿರುದ್ಧ ಪೊಲೀಸ್ ಪಡೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ ಎಂದರು. ರಾತ್ರಿ ಸಮಯದಲ್ಲಿ ನಾವು ಕಾರ್ಯಾಚರಣೆ ನಡೆಸಿದರೆ ಅವರಲ್ಲಿರುವ ಅತ್ಯಾಧುನಿಕ ಉಪಕರಣಗಳಿಂದ ಅವರು ನಮ್ಮನ್ನು ನೋಡಬಲ್ಲರು. ಆದರೆ ಅದೇ ರೀತಿಯ ಉಪಕರಣಗಳು ನಮ್ಮಬಳಿ ಇಲ್ಲ ಎಂದು ಹೇಳಿದರು.
ಖೈಬರ್ ಪಖ್ತುನಖ್ವಾ ಪ್ರದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಮೊವಾಝಮ್ ಜಾಹ್ ಅನ್ಸಾರಿ ಮಾತನಾಡಿ, ನವೆಂಬರ್‌ನಲ್ಲಿ ಅಮೆರಿಕನ್ನರು ಬಿಟ್ಟುಹೋದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಗ್ರಗಾಮಿಗಳು ಪಡೆದುಕೊಂಡು ಪ್ರಾಂತದ ಪೊಲೀಸರ ವಿರುದ್ಧ ಯುದ್ಧ ನಡೆಸುತ್ತಿದ್ದಾರೆ ಎಂದು ಹೇಳಿದರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ನಂತರ ಪಾಕಿಸ್ತಾನದಲ್ಲಿ ಟಿಟಿಪಿ ದಾಳಿಗಳು ಉಲ್ಬಣಗೊಂಡಿವೆ.
ಅಫ್ಘನ್ ತಾಲಿಬಾನ್ ಹಾಗೂ ತೆಹ್ರೀಕ್ ಎ ತಾಲಿಬಾನ್ ಎರಡೂ ಉಗ್ರಗಾಮಿ ಗುಂಪುಗಳು ಸೈದ್ಧಾಂತಿಕ ಮತ್ತು ಸಾಂಸ್ಥಿಕವಾಗಿ ಮಿತ್ರರಾಗಿವೆ. ಅಮೆರಿಕ ನಿರ್ಮಿತ, ಉತ್ತಮ ಸ್ಥಿತಿಯಲ್ಲಿರುವ M4 ಅಸಾಲ್ಟ್ ರೈಫಲ್ ಈಗ ಪಾಕಿಸ್ತಾನದ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಕೇವಲ 1400 ಡಾಲರ್ಗಳಿಗೆ ಸಿಗುತ್ತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಸ್ಟಡೀಸ್ (PIPS) ಪ್ರಕಾರ 2021 ಕ್ಕೆ ಹೋಲಿಸಿದರೆ ದೇಶದಲ್ಲಿ ಕಳೆದ ವರ್ಷ ಭಯೋತ್ಪಾದಕ ದಾಳಿಗಳ ಸಂಖ್ಯೆ 27 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ವರ್ಷ ವರದಿಯಾದ 262 ಭಯೋತ್ಪಾದಕ ದಾಳಿಗಳಲ್ಲಿ ಕನಿಷ್ಠ 419 ಜನರು ಸಾವನ್ನಪ್ಪಿದ್ದರೆ, 734 ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಮರುಕಳಿಸುವ ಸಾಧ್ಯತೆ: ಜಮಾತ್-ಎ-ಇಸ್ಲಾಮಿ ಎಚ್ಚರಿಕೆ