ಮಾಸ್ಕೋ: ರಷ್ಯಾದ ಶಾಲೆಯೊಂದರಲ್ಲಿ ಭೀಕರ ಶೂಟೌಟ್ ನಡೆದಿದೆ. ಇದರಲ್ಲಿ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ 9 ಜನರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಅಪರಿಚಿತ ದಾಳಿಕೋರ ತಾನೂ ಗುಂಡು ಹಾರಿಸಿಕೊಂಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯ ರಷ್ಯಾದ ಇಝೆವ್ಸ್ಕ್ ನಗರದ ಶಾಲೆಯ ಮೇಲೆ ಅಪರಿಚಿತ ದಾಳಿಕೋರ ಏಕಾಏಕಿ ಗುಂಡಿನ ಸುರಿಮಳೆಗರೆದಿದ್ದಾನೆ. ಗುಂಡೇಟಿಗೆ ಇಬ್ಬರು ಭದ್ರತಾ ಸಿಬ್ಬಂದಿ, ಇಬ್ಬರು ಶಿಕ್ಷಕರು ಮತ್ತು ಐದು ಚಿಕ್ಕ ಮಕ್ಕಳು ಸಾವಿಗೀಡಾಗಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ದಾಳಿಕೋರ ನಾಜಿ ಪಂಥದವನಾಗಿದ್ದು, ನಾಜಿ ಚಿಹ್ನೆಗಳು ಮತ್ತು ಬಾಲಾಕ್ಲಾವಾ ಹೊಂದಿರುವ ಕಪ್ಪು ಬಟ್ಟೆಯನ್ನು ಧರಿಸಿದ್ದ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವುದೇ ನಿಖರ ಗುರುತಿನ ಚಿಹ್ನೆಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಗುಂಡಿನಮ ದಾಳಿಯಲ್ಲಿ ಸುಮಾರು 20 ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಷ್ಯಾದ ಭದ್ರತಾ ಸಚಿವಾಲಯ ತಿಳಿಸಿದೆ.