ಗಲ್ಫ್, ಅಮೆರಿಕ: ಫ್ಲೋರಿಡಾದ ಗಲ್ಫ್ ಕೋಸ್ಟ್ ಬಳಿ ಗುರುವಾರ ಸಣ್ಣ ವಿಮಾನವೊಂದು ಪತನಗೊಂಡಿದ್ದು, ಈ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನವು ವೆನಿಸ್ ವಿಮಾನ ನಿಲ್ದಾಣದಿಂದ ಹೊರಟು ಬುಧವಾರ ರಾತ್ರಿ 9:30 ರ ನಂತರ ಪಶ್ಚಿಮಕ್ಕೆ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಪತನಗೊಂಡಿದೆ ಎಂದು ವೆನಿಸ್ ಪೊಲೀಸರು ತಿಳಿಸಿದ್ದಾರೆ. ಈ ಅಪಘಾತದ ದೃಶ್ಯವನ್ನು ನೋಡಿದ ಸ್ಥಳೀಯರು 911 ಗೆ ಕರೆ ಮಾಡಿ ವಿಮಾನ ಪತನದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವೆನಿಸ್ ಪೊಲೀಸ್ ಕ್ಯಾಪ್ಟನ್ ಆಂಡಿ ಲೀಸೆನ್ರಿಂಗ್ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ವಿಡಿಯೋ ದೃಶ್ಯಾವಳಿ ಮತ್ತು ಅಪಘಾತದ ಸ್ಥಳವನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸರಿಗೆ ವಿಡಿಯೋ ತುಣುಕಗಳನ್ನು ಹಸ್ತಾಂತರಿಸಿದೆ.
23 ಅಡಿಯ ನೀರಿನಲ್ಲಿ ಕಂಡುಬಂದ ವಿಮಾನ: ಪೈಪರ್ ಪಿಎ-32ಆರ್ ವಿಮಾನವು ಸುಮಾರು 23 ಅಡಿ ನೀರಿನ ಅಡಿಯಲ್ಲಿ ಅದರ ಅವಶೇಷಗಳು ಕಂಡುಬಂದಿದೆ. ಈಜುಗಾರರು ಮತ್ತು ಡೈವಿಂಗ್ ತಜ್ಞರಿಂದ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ವಿಮಾನ ಅಪಘಾತದಲ್ಲಿ ಮೃತಪಟ್ಟ ನಾಲ್ವರನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಮೃತ ದಂಪತಿಗಳಾದ ಪೆಟ್ರೀಷಿಯಾ ಲುಂಪ್ಕಿನ್ (68), ವಿಲಿಯಂ ಜೆಫ್ರಿ ಲುಂಪ್ಕಿನ್ (64) ಮತ್ತು ರಿಕಿ ಜೋ ಬೀವರ್ (60) ಮತ್ತು ಎಲಿಜಬೆತ್ ಆನ್ನೆ ಬೀವರ್ (57) ಎಂದು ತಿಳಿದು ಬಂದಿದೆ.
ಪತನಕ್ಕೂ ಮುನ್ನ ಸ್ನೇಹಿತರೊಂದಿಗೆ ಭೋಜನ: ಲುಂಪ್ಕಿನ್ ದಂಪತಿ ಇಂಡಿಯಾನಾದ ಫಿಶರ್ಸ್‌ನಿಂದ ಬಂದ್ರೆ, ಬೀವರ್ ದಂಪತಿಗಳು ಇಂಡಿಯಾನಾದ ನೋಬಲ್ಸ್‌ವಿಲ್ಲೆಯಿಂದ ಬಂದಿದ್ದಾರೆ. ಈ ದಂಪತಿ ಸೇಂಟ್ ಪೀಟರ್ಸ್‌ಬರ್ಗ್‌ನಿಂದ ಹೊರಟು ಸಂಜೆ 5 ಗಂಟೆಗೆ ವೆನಿಸ್‌ಗೆ ಬಂದು ತಲುಪಿದರು. ಏರ್ಪೋರ್ಟ್ನಲ್ಲಿ ತಮ್ಮ ವಿಮಾನ ನಿಲ್ಲಿಸಿದ ಬಳಿಕ ಈ ಜೋಡಿಗಳು ಪಿಯರ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸ್ನೇಹಿತರೊಂದಿಗೆ ರಾತ್ರಿ ಊಟ ಸವಿದರು. ರಾತ್ರಿ 9 ಗಂಟೆಯ ನಂತರ ಅವರು ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಿದರು. ಸ್ವಲ್ಪ ಸಮಯದ ಬಳಿಕ ಅಂದ್ರೆ ರಾತ್ರಿ 9.30ಕ್ಕೆ ಅವರು ವೆನಿಸ್ ವಿಮಾನ ನಿಲ್ದಾಣದಿಂದ ಆ ನಾಲ್ವರು ತಮ್ಮ ಲಘು ಗಾತ್ರದ ವಿಮಾನದಲ್ಲಿ ಪ್ರಯಾಣ ಬೆಳೆಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ರಾತ್ರಿ 9:30ಕ್ಕೆ ಹಾರಾಟ ನಡೆಸಿದ ವಿಮಾನ ಸ್ವಲ್ಪ ಸಮಯದ ಬಳಿಕ ಪಿಯರ್‌ನ ಪಶ್ಚಿಮದ ಮೆಕ್ಸಿಕೋ ಕೊಲ್ಲಿಗೆ ಅಪ್ಪಳಿಸಿತು. ಈ ವಿಮಾನ ಪತನವಾಗುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ರಾತ್ರಿ ಆದ ಹಿನ್ನೆಲೆ ಪೊಲೀಸರು ರಕ್ಷಣಾ ಕಾರ್ಯ ಕೈಗೊಳ್ಳಲು ಕಷ್ಟ ಸಾಧ್ಯವಾಯಿತು ಎಂದು ಹೇಳಿದರು. ಬಳಿಕ ನಾಲ್ವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಓದಿ: ಕೊಚ್ಚಿ ಏರ್ಪೋರ್ಟ್ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ