ಕಿನ್ಶಾಸಾ( ಕಾಂಗೋ): ಕಾಂಗೋ ನದಿಯಲ್ಲಿ ದೋಣಿಯೊಂದಕ್ಕೆ ಬೆಂಕಿ ತಗುಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದೋಣಿಯಲ್ಲಿ ಇಂಧನ ಸಾಗಿಸಲಾಗುತ್ತಿತ್ತು. ರಾಜಧಾನಿ ಕಿನ್ಶಾಸಾದ ಪೂರ್ವ ಭಾಗದಿಂದ Mbandaka ನಗರಕ್ಕೆ ಈ ದೋಣಿ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಈ ದುರಂತದಲ್ಲಿ ಕನಿಷ್ಠ 11 ಜನರನ್ನು ರಕ್ಷಿಸಲಾಗಿದೆ. ಕೆಲವರು ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಇದೇ ಕಾಂಗೋ ನದಿಯಲ್ಲಿ ದೋಣಿಯೊಂದು ಮುಳುಗಿ 40 ಮಂದಿ ಮೃತಪಟ್ಟಿದ್ದರು. ಈ ಘಟನೆ ಮರೆಯುವ ಮುನ್ನವೇ ಇಂತಹದ್ದೇ ಮತ್ತೊಂದು ದುರಂತ ಸಂಭವಿಸಿದೆ. ಸಾಮಾನ್ಯವಾಗಿ ಓವರ್‌ಲೋಡ್ ಆಗಿರುವ ತಾತ್ಕಾಲಿಕ ದೋಣಿಗಳ ಬಳಕೆಯಿಂದಾಗಿ ಇಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂಬಂತಾಗಿದೆ ಎಂದು ವರದಿಯಾಗಿದೆ.
ದೇಶದ ವಾಯುವ್ಯದಲ್ಲಿರುವ ಬಹುಪಾಲು ಜನರು ಉತ್ತಮ ರಸ್ತೆಗಳ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಸರಕು ಸಾಗಣೆ ಹಾಗೂ ಬೇರೆಡೆ ಹೋಗಲು ಕಾಂಗೋ ನದಿಯನ್ನೇ ಬಳಸುತ್ತಾರೆ. ನದಿ ಮಾರ್ಗದ ಮೂಲಕ ಪ್ರಯಾಣ ಮಾಡುವುದು ಕಡಿಮೆ ವೆಚ್ಚದಿಂದ ಕೂಡಿರುವುದರಿಂದ ಇಲ್ಲಿನ ಜನ ದೋಣಿಗಳನ್ನೇ ಹೆಚ್ಚಾಗಿ ಬಳಸುತ್ತಾರೆ.
ದೇಶದ ಪಶ್ಚಿಮದಲ್ಲಿ ಇಂತಹ ಅಪಘಾತಗಳು ತುಸು ಹೆಚ್ಚೇ ಅಂತಾರೆ ಸ್ಥಳೀಯರು. ಈ ನಡುವೆ ಈ ಭಾಗದಲ್ಲಿ ಹೆಚ್ಚಿನ ಸಂಘರ್ಷಗಳು ನಡೆಯುತ್ತವೆ. ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ ಉತ್ತರ ಕಿವು ಪ್ರಾಂತ್ಯದ ರುತ್ಶುರು ವಿಭಾಗದಲ್ಲಿ ಭಾನುವಾರ ರಾತ್ರಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಬಂಡಾಯ ಗುಂಪು ಇಲ್ಲಿನ ಜನರ ಮನೆಗಳನ್ನು ಸುಟ್ಟುಹಾಕಿದ್ದಾರೆ. M23 ಎಂಬ ಬಂಡುಕೋರರ ಗುಂಪು ಈ ದಾಳಿಯನ್ನು ನಡೆಸಿದೆ ಎಂದು ರುತ್ಶುರು ಟೆರಿಟರಿ ಯೂತ್ ಕೌನ್ಸಿಲ್‌ನ ಉಪಾಧ್ಯಕ್ಷ ಜಸ್ಟಿನ್ ಕಳೆಗೆಸೆರೆ ಹೇಳಿದ್ದಾರೆ.
M23 ಬಂಡಾಯ ಗುಂಪು, ಹೆಚ್ಚಾಗಿ ಕಾಂಗೋಲೀಸ್ ಜನಾಂಗೀಯ ಟುಟ್ಸಿಗಳನ್ನು ಒಳಗೊಂಡಿದೆ. 10 ವರ್ಷಗಳ ಹಿಂದೆ ಅದರ ಹೋರಾಟಗಾರರು ರುವಾಂಡಾದ ಗಡಿಯಲ್ಲಿರುವ ಪೂರ್ವ ಕಾಂಗೋದ ಅತಿದೊಡ್ಡ ನಗರವಾದ ಗೋಮಾವನ್ನು ವಶಪಡಿಸಿಕೊಂಡಿದ್ದರು, ಆಗಿನಿಂದ ಇವರ ಪ್ರಾಬಲ್ಯ ವಿಶ್ವಕ್ಕೆ ಪರಿಚಯವಾಗಿತ್ತು. ಮಾರ್ಚ್ 23, 2009 ರ ಶಾಂತಿ ಒಪ್ಪಂದ ನಡೆದಿತ್ತು. ಈ ವೇಳೆ ಈ ಗುಂಪಿಗೆ ಎಂ23 ಎಂದು ನಾಮಕರಣ ಮಾಡಲಾಗಿತ್ತು.
ಇದನ್ನು ಓದಿ: ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧ: ಗಾಜಾದಲ್ಲಿ ಇಂಧನ, ವಿದ್ಯುತ್ ಕೊರತೆ; 30 ಆಸ್ಪತ್ರೆಗಳಲ್ಲಿ ರೋಗಿ, ಶಿಶುಗಳ ಸಾವಿನ ಆತಂಕ