ನವದೆಹಲಿ: ವಿಶ್ವದ ಆರ್ಥಿಕತೆ ಮತ್ತು ಇತರ ವಲಯದ ಮೇಲೆ ಕೆಟ್ಟ ಪರಿಣಾಮ ಬೀರಿರುವ ರಷ್ಯಾ - ಉಕ್ರೇನ್ ಯುದ್ಧಕ್ಕೆ 100 ದಿನ. ಹಲವಾರು ಸಾವು - ನೋವುಗಳಿಗೆ ಕಾರಣವಾಗಿರುವ ಈ ಮಹಾಯುದ್ಧದಲ್ಲಿ ರಷ್ಯಾ ಮಾತ್ರ ಇಲ್ಲಿಯವರೆಗೆ ಸಂಪೂರ್ಣ ಮೇಲುಗೈ ಸಾಧಿಸಿಲ್ಲ. ಚಿಕ್ಕ ರಾಷ್ಟ್ರ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇರುವ ರಷ್ಯಾ ಮಾತ್ರ ಸಂಪೂರ್ಣ ಜಯ ಸಾಧಿಸಿಲ್ಲ ಇದಕ್ಕೆ ಮುಖ್ಯ ಕಾರಣ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ.
ಮನರಂಜನಾ ಪ್ರಪಂಚದಿಂದ ಅಧ್ಯಕ್ಷ ಸ್ಥಾನಕ್ಕೆ ಬಂದ 44 ವರ್ಷದ ವ್ಯಕ್ತಿ ವೊಲೊಡಿಮಿರ್, ರಷ್ಯಾದ ದೈತ್ಯ ಸೇನೆಯ ಆಕ್ರಮಣ ತಡೆದಿರುವ ಪರಿ ಮಾತ್ರ ವಿಪರ್ಯಾಸವೇ ಸರಿ. ಯುದ್ಧ ಆರಂಭಗೊಂಡು 100 ದಿನ ಕಳೆದಿದ್ದು, ಇಲ್ಲಿಯವರೆಗೆ ವೊಲೊಡಿಮಿರ್ ಝೆಲೆನ್ಸ್ಕಿ 100 ಭಾಷಣಗಳಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನಿಯನ್ನರನ್ನು ಒಟ್ಟುಗೂಡಿಸುವ ಕೆಲಸ ಮಾಡಿ, ಯಶಸ್ಸು ಸಾಧಿಸಿದ್ದಾರೆ.
ರಷ್ಯಾ - ಉಕ್ರೇನ್ ಯುದ್ಧಕ್ಕೆ 100 ದಿನ: 100 ದಿನಗಳ ಹಿಂದೆ ರಷ್ಯಾ ಪಡೆ ಉಕ್ರೇನ್ ಮೇಲೆ ದಾಳಿ ಮಾಡಿದಾಗ, ಕೆಲ ದಿನಗಳಲ್ಲೇ ಅದು ಸಂಪೂರ್ಣವಾಗಿ ನಿರ್ಣಾಮಗೊಳ್ಳಲಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಎಲ್ಲರೂ ಅಲ್ಲಿಂದ ಪಲಾಯನ ಮಾಡುವಂತೆ ವಿಶ್ವ ನಾಯಕರು ಸಲಹೆ ಸಹ ನೀಡಿದ್ದರು. ಆದರೆ, ಇಲ್ಲಿಯವರೆಗೆ ಮಾತ್ರ ಉಕ್ರೇನ್ ಮೇಲೆ ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿಲ್ಲ.
ರಷ್ಯಾ ವಿರುದ್ಧ ಉಕ್ರೇನಿಯನ್ನರ ಒಟ್ಟುಗೂಡಿಸುವ ಕೆಲಸ ಮಾಡಿರುವ ಉಕ್ರೇನ್ ಅಧ್ಯಕ್ಷ ಇಲ್ಲಿಯವರೆಗೆ 100 ಭಾಷಣ ಮಾಡಿದ್ದಾರೆ. ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಜನರಲ್ಲಿ ಸ್ವಾಭಿಮಾನ ತುಂಬುವ ಕೆಲಸ ಮಾಡಿದ್ದಾರೆ. ಅವರ ನೇರವಾದ ಮಾತು ಉಕ್ರೇನ್ ಜನರಲ್ಲಿ ಹೋರಾಡುವ ಕಿಚ್ಚು ಮೂಡಿಸಿದವು.
ಉಕ್ರೇನ್ ಅಧ್ಯಕ್ಷರ 100 ಭಾಷಣ: ದಣಿವರಿಯದ ರೀತಿಯಲ್ಲಿ ಕೆಲಸ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ವಿಶ್ವಸಂಸ್ಥೆ, ಬ್ರಿಟಿಷ್ ಪಾರ್ಲಿಮೆಂಟ್, ಯುಎಸ್ ಕಾಂಗ್ರೆಸ್ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 24ಕ್ಕೂ ಹೆಚ್ಚು ಸಂಸತ್ಗಳಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಇವರ ಮಾತಿನಿಂದಾಗಿ ಬ್ರಿಟನ್, ಅಮೆರಿಕ, ಫ್ರಾನ್ಸ್ ಸೇರಿದಂತೆ ಅನೇಕ ದೇಶಗಳು ಅವರಿಗೆ ಆರ್ಥಿಕವಾಗಿ ಮಾತ್ರವಲ್ಲದೇ ಶಸ್ತ್ರಾಸ್ತ್ರ ಸಹ ಪೂರೈಕೆ ಮಾಡಿದೆ. ಯುದ್ಧದ 100ನೇ ದಿನವಾದ ನಿನ್ನೆ ಉಕ್ರೇನ್ ಅಧ್ಯಕ್ಷ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು, ಶಾಂತಿ, ವಿಜಯ, ಉಕ್ರೇನ್,ದೇಶದ ವೈಭವದ ಬಗ್ಗೆ ಮಾತನಾಡಿದ್ದಾರೆ.
2022ರ ಫೆಬ್ರವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿತ್ತು. ಉಕ್ರೇನ್ನಂತಹ ಪುಟ್ಟದೇಶವನ್ನ ರಷ್ಯಾ ಆದಷ್ಟು ಬೇಗ ವಶಪಡಿಸಿಕೊಳ್ಳಲಿದೆ ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಉಕ್ರೇನಿಗಳ ತೀವ್ರ ಪ್ರತಿರೋಧ ಹಾಗೂ ಅಂತಾರಾಷ್ಟ್ರೀಯ ಒತ್ತಡದ ಕಾರಣ ರಷ್ಯಾಗೆ ಈವರೆಗೆ ಕೇವಲ ಶೇ.20ರಷ್ಟು ಉಕ್ರೇನ್ನ ಭಾಗವನ್ನ ವಶಪಡಿಸಿಕೊಳ್ಳಲು ಮಾತ್ರವೇ ಸಾಧ್ಯವಾಗಿದೆ.
ಸಾವಿರಾರು ಸಾವು - ನೋವು: ಉಭಯ ದೇಶಗಳ ನಡುವಿನ ಯುದ್ಧದಿಂದಾಗಿ ಎಷ್ಟೊಂದು ಜನರು ಸಾವನ್ನಪ್ಪಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅಂದಾಜಿನ ಪ್ರಕಾರ 27 ಸಾವಿರ ಉಕ್ರೇನಿ ನಾಗರಿಕರು, 23 ಸಾವಿರ ಯೋಧರು ಸಾವನ್ನಪ್ಪಿದ್ದಾರೆ. ರಷ್ಯಾದ 15 ಸಾವಿರ ಯೋಧರು ಮೃತರಾಗಿದ್ದು, 40 ಸಾವಿರ ಯೋಧರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.