ರಿಯಾದ್ (ಸೌದಿ ಅರೇಬಿಯಾ): ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಾರ್ಷಿಕ ಹಜ್ ಯಾತ್ರೆಯ ಸಂದರ್ಭದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸೌದಿ ಅರೇಬಿಯಾ ಸರಣಿ ಕ್ರಮಗಳನ್ನು ಪ್ರಕಟಿಸಿದೆ.
ಸೌದಿ ಅರೇಬಿಯಾದ ಕೇವಲ 1,000 ಜನಕ್ಕೆ ಮಾತ್ರ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಇಸ್ಲಾಂನ ಅತ್ಯಂತ ಪವಿತ್ರ ಸ್ಮಾರಕ ಕಾಬಾವನ್ನು ಮುಟ್ಟಲು ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಇರಲಿದೆ ಎಂದು ಬಿಬಿಸಿ ವರದಿ ಮಾಡಿದೆ.
ವಾರ್ಷಿಕ ಸಭೆಗಾಗಿ ಈ ಜುಲೈ ಮತ್ತು ಅಗಸ್ಟ್‌ನಲ್ಲಿ ಸುಮಾರು ಎರಡು ಮಿಲಿಯನ್ ಜನರು ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿತ್ತು. ಆದರೆ, ಸೌದಿ ನಿವಾಸಿಗಳಿಗೆ ಮಾತ್ರ ಈ ವರ್ಷ ಹಾಜರಾಗಲು ಅವಕಾಶವಿರುತ್ತದೆ. ಸೌದಿ ಅರೇಬಿಯಾದಲ್ಲಿ ಒಟ್ಟು 2,09,509 ಕೋವಿಡ್-19 ಪ್ರಕರಣ ವರದಿಯಾಗಿವೆ. 1,916 ಸೋಂಕಿತರು ಮೃತಪಟ್ಟಿದ್ದಾರೆ.
ಸೌದಿ ಅರೇಬಿಯಾ ತೀರ್ಥಯಾತ್ರೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುತ್ತಿರುವುದು ಇದೇ ಮೊದಲಲ್ಲ. 2014 ಮತ್ತು 2016ರ ನಡುವೆ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಇತರ ಹಲವು ಆಫ್ರಿಕನ್ ದೇಶಗಳ ಮುಸ್ಲಿಂ ಯಾತ್ರಿಗರನ್ನು ಎಬೋಲಾ ಕಾರಣದಿಂದಾಗಿ ಹಜ್ ಪ್ರವಾಸದಿಂದ ಹೊರಗಿಡಲಾಗಿತ್ತು.