ದುಬೈ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜನರು ಪವಿತ್ರ ರಂಜಾನ್ ತಿಂಗಳಲ್ಲಿ ಮನೆಯಲ್ಲೇ ಪ್ರಾರ್ಥನೆ ಮಾಡಬಹುದು ಎಂದು ದುಬೈ ಸರ್ಕಾರ ತಿಳಿಸಿದೆ.
ತರಾವೀಹ್ ಪ್ರಾರ್ಥಿಸುವ ಜನರು ಪವಿತ್ರ ಕುರಾನ್ ಓದುವಾಗ ಕೈಯಲ್ಲೇ ಪುಸ್ತಕ ಹಿಡಿದು ಪಠಿಸುತ್ತ ಪ್ರಾರ್ಥನೆ ಸಲ್ಲಿಸಬಹುದು ಎಂದು ದುಬೈ ಸರ್ಕಾರದ ಇಸ್ಲಾಮಿಕ್ ವ್ಯವಹಾರ ಮತ್ತು ದತ್ತಿ ಚಟುವಟಿಕೆಗಳ ಇಲಾಖೆ (ಐಎಸಿಎಡಿ) ಹೇಳಿದೆ. ರಂಜಾನ್ ಉಪವಾಸದ ತಿಂಗಳು ಪ್ರತಿದಿನ ಸಂಜೆ ತರಾವೀಹ್ ಪ್ರಾರ್ಥನೆ ಮತ್ತು ರಾತ್ರಿ ಇಶಾ ಪ್ರಾರ್ಥನೆ ಮಾಡಲಾಗುತ್ತದೆ.
ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ದುಬೈನಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೂ ದುಬೈನಲ್ಲಿ ಮಸೀದಿಗಳನ್ನು ಮುಚ್ಚಲಾಗುತ್ತದೆ ಎಂದು ಇಸ್ಲಾಮಿಕ್ ವ್ಯವಹಾರ ಮತ್ತು ದತ್ತಿ ಚಟುವಟಿಕೆಗಳ ಇಲಾಖೆ ತಿಳಿಸಿದೆ.
ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲಜೀಜ್ ಅಲ್-ಶೇಖ್ ಪೂಜಕರು ತರಾವೀಹ್ ಪ್ರಾರ್ಥನೆ ಮತ್ತು ಈದ್ ಪ್ರಾರ್ಥನೆಗಳನ್ನು ಮನೆಯಲ್ಲಿ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಯುಎಇನಲ್ಲಿ 70 ಸಾವಿರಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದು, 37 ಜನರು ಸಾವಿಗೀಡಾಗಿದ್ದಾರೆ.