ಸಿಯೋಲ್(ದಕ್ಷಿಣ ಕೊರಿಯಾ): ಯುದ್ದ ವಿಮಾನ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ನಡೆಸಿದೆ ಎಂದು ತಿಳಿದು ಬಂದಿದೆ. ಷರತ್ತುಬದ್ಧ ಮಾತುಕತೆ ಮಾಡಿಕೊಂಡು ಉತ್ತರ ಕೊರಿಯಾ ತನ್ನ ಮೊದಲ ಕ್ಷಿಪಣಿ ಪರೀಕ್ಷೆಗಳನ್ನು ಕಳೆದ ಆರು ತಿಂಗಳಿಂದ ಪುನರಾರಂಭಿಸಿದೆ.
ಈ ತಿಂಗಳಲ್ಲಿ ನಡೆದ ನಾಲ್ಕನೇ ಪರೀಕ್ಷೆ ಇದಾಗಿದೆ. ಸತತವಾಗಿ ಕ್ಷಿಪಣಿ ಪರೀಕ್ಷೆಗಳನ್ನು ಕೈಗೊಂಡು ಅಮೆರಿಕಕ್ಕೆ ಉತ್ತರ ಕೊರಿಯಾ ಟಾಂಗ್ ಕೊಡುತ್ತಿದೆ. ಒಂದು ಕಡೆ ದಕ್ಷಿಣ ಕೊರಿಯಾ ಜತೆ ಮಾತುಕತೆ ಪ್ರಸ್ತಾಪ ಇಡುತ್ತಲೇ ಮತ್ತೊಂದೆಡೆ ಸರಣಿ ಎಂಬಂತೆ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗಗಳನ್ನ ಒಂದರ ಹಿಂದೊಂದರಂತೆ ನೆರವೇರಿಸುತ್ತಲೇ ಇದೆ.
ಇನ್ನು ಇಂದು ನಡೆಸಿದ ವೈರಿ ಪಡೆಗಳ ಯುದ್ಧ ವಿಮಾನಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಯುದ್ದ ವಿಮಾನ ನಿಗ್ರಹ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.
ಇನ್ನು ಉತ್ತರ ಕೋರಿಯಾ ನಡೆಸಿರುವ ಈ ವಿಮಾನ ನಿಗ್ರಹ ಕ್ಷಿಪಣಿಗೆ 2 ರಾಡರ್ ನಿಯಂತ್ರಕಗಳು ಸೇರಿದಂತೆ ಅಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದು ಶಬ್ದಕ್ಕಿಂತ 5 ಪಟ್ಟು ವೇಗವಾಗಿ ಚಲಿಸುತ್ತದೆ ಎನ್ನಲಾಗಿದೆ. ಜೊತೆಗೆ ಈ ಪ್ರಯೋಗ ಬಹಳ ಪ್ರಾಯೋಗಿಕ ಮಹತ್ವ ಹೊಂದಿದೆ ಎಂದು ತಿಳಿಸಿದೆ.