ರಾಮಲ್ಲಾಹ್(ಪ್ಯಾಲೆಸ್ಟೇನ್) : ಪ್ಯಾಲೆಸ್ಟೇನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ದಿನೇದಿನೆ ತೀವ್ರಗೊಳ್ಳುತ್ತಿದೆ. ಶನಿವಾರ ಇಸ್ರೇಲ್ ನಡೆಸಿದ ಗುಂಡಿನ ದಾಳಿಯಲ್ಲಿ ಪ್ಯಾಲೆಸ್ಟೇನ್ ಮೂಲದ ವ್ಯಕ್ತಿ ಹತ್ಯೆಯಾಗಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ಯಾಲೆಸ್ಟೇನ್ ಆರೋಗ್ಯ ಸಚಿವಾಲಯವು, ನಬ್ಲಸ್ ನಗರದ ಕುಸ್ರಾ ಗ್ರಾಮದ 20 ವರ್ಷದ ಮೊಹಮ್ಮದ್ ಫರೀದ್ ಹಸನ್ ಎಂಬಾತನನ್ನು ಇಸ್ರೇಲ್ ಸೇನೆ ಹತ್ಯೆಗೈದಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪ ಕುರಿತು ಹೇಳಿಕೆ ನೀಡಿರುವ ಇಸ್ರೇಲ್ ಸೇನೆ, ನಬ್ಲಸ್ನ ದಕ್ಷಿಣಕ್ಕೆ ಕುಸ್ರಾ ಹಳ್ಳಿಯ ಪಕ್ಕದಲ್ಲಿ ಪ್ಯಾಲೆಸ್ಟೇನಿಯಾ ಹಾಗೂ ಇಸ್ರೇಲಿ ವಸಾಹತುಗಾರರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದೆ. ಈ ಸಮಯದಲ್ಲಿ ಕಲ್ಲು ತೂರಾಟ ನಡೆಯಿತು. ಅಲ್ಲಿದ್ದ ಸೈನಿಕರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದು, ಯುವಕನೊಬ್ಬ ಸೇನೆಯ ಮೇಲೆ ಸ್ಫೋಟಕ ವಸ್ತು ಎಸೆದಿದ್ದಾನೆ. ಅವನಿಗೆ ಬೆದರಿಸಲು ಫೈರಿಂಗ್ ಮಾಡಲಾಯಿತು. ಆ ವೇಳೆ ಘಟನೆ ಸಂಭವಿಸಿದೆ ಎಂದು ಸಮಜಾಯಿಷಿ ನೀಡಿದೆ.
1967 ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ಟೇನ್ ಪ್ರದೇಶವಾದ ವೆಸ್ಟ್ ಬ್ಯಾಂಕ್‌ನಲ್ಲಿ ಯಹೂದಿ ವಸಾಹತುಗಳು ಹೆಚ್ಚುತ್ತಿವೆ. ಹಾಗಾಗಿ ಪ್ಯಾಲೆಸ್ಟೇನ್ ಮತ್ತು ಇಸ್ರೇಲ್ ವಸಾಹತುಗಾರರು ಮತ್ತು ಸೇನೆಯ ನಡುವಿನ ಘರ್ಷಣೆ ಸಾಮಾನ್ಯವಾಗಿದೆ.
ಬೀಟಾ ಗ್ರಾಮದ ಬಳಿ ಅಕ್ರಮವಾಗಿ ಯಹೂದಿಗಳು ವಾಸಿಸುತ್ತಿದ್ದು, ಪ್ಯಾಲೆಸ್ಟೇನಿಯಾದವರು ತೀವ್ರ ಪ್ರತಿಭಟನೆ ನಡೆಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ನಬ್ಲಸ್ ಪ್ರದೇಶ ಉದ್ವಿಗ್ನತೆಗೆ ಸಾಕ್ಷಿಯಾಗುತ್ತಿದೆ.