ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರತಿ ವರ್ಷ 'ಕಿಂಗ್ ಅಬ್ದುಲಜೀಜ್ ಒಂಟೆ ಉತ್ಸವ' ನಡೆಯುತ್ತದೆ. ಒಂಟೆಗಳಿಗೂ ನಡೆಸುವ ಸೌಂದರ್ಯ ಸ್ಪರ್ಧೆ ಇದಾಗಿದ್ದು, ಇಲ್ಲಿಯವರೆಗೆ ಪುರುಷರು ಮಾತ್ರ ತಮ್ಮ ಕ್ಯಾಮಲ್ಗಳೊಂದಿಗೆ ಪಾಲ್ಗೊಳ್ಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರು ಕೂಡ ಎಂಟ್ರಿ ಕೊಟ್ಟಿದ್ದಾರೆ.
2017 ರಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಸಂಗೀತ ಉತ್ಸವಗಳನ್ನು ಆಯೋಜಿಸುವುದು ಮತ್ತು ಲಿಂಗಗಳ ಆಧಾರದ ಮೇಲೆ ಕಡಿಮೆ ನಿರ್ಬಂಧ ಹೇರುವುದು ಸೇರಿದಂತೆ ಅನೇಕ ಬದಲಾವಣೆಗಳನ್ನು ಸೌದಿ ಅರೇಬಿಯಾ ಕಂಡಿದೆ. ಇದೀಗ ಒಂಟೆ ಸೌಂದರ್ಯ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ 25 ಮಹಿಳೆಯರು ತಮ್ಮ ತಮ್ಮ ಹೆಚ್ಚು ಮೌಲ್ಯಯುತ ಒಂಟೆಗಳನ್ನು ಪ್ರದರ್ಶಿಸಿದ್ದಾರೆ.
"ನಾನು ಹಲವಾರು ವರ್ಷಗಳಿಂದ ಅನೇಕ ಒಂಟೆ ಮಾಲೀಕರನ್ನು ಭೇಟಿಯಾಗುತ್ತಿದ್ದೆ. ಒಂದು ದಿನ ನಾನು ಕೂಡ ಉತ್ಸವದಲ್ಲಿ ಭಾಗವಹಿಸುತ್ತೇನೆ ಎಂದು ಅವರ ಬಳಿ ಹೇಳಿ ನಗೆಪಾಟಲಿಗೀಡಾಗುತ್ತಿದ್ದೆ. ಆದರೆ ಈಗ ನನ್ನ ಆಸೆ ಈಡೇರಿದೆ ಎಂದು ಸ್ಪರ್ಧೆಯಲ್ಲಿ ಪಾಲ್ಗೊಂಡ ಮುನಿರಾ ಅಲ್ ಮುಖಾಸ್ ಎಂಬ ಮಹಿಳೆ ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೋಡಿ: ಗೋವಾದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನ್ಯೂ ಇಯರ್ ಪಾರ್ಟಿ
40 ದಿನಗಳ ಕಾಲ ನಡೆಯುವ ಈ ಈವೆಂಟ್‌ನಲ್ಲಿ ಒಂಟೆಗಳನ್ನು ಮುಖ್ಯವಾಗಿ ಬಣ್ಣ, ತುಟಿಗಳು, ಕುತ್ತಿಗೆ ಮತ್ತು ಗೂನು ಬೆನ್ನಿನ ಗಾತ್ರದ ಮೇಲೆ ಪರಿಗಣಿಸಲಾಗುತ್ತದೆ. ಡಿಸೆಂಬರ್‌ನಲ್ಲೇ ಸ್ಪರ್ಧೆ ಪ್ರಾರಂಭವಾಗಿದ್ದು, ಇದೀಗ ಅಂತಿಮ ಹಂತದವರೆಗೆ ಬಂದಿದೆ. ಒಂಟೆಗಳಿಗೆ ಬೊಟೊಕ್ಸ್ ಚುಚ್ಚುಮದ್ದನ್ನು ನೀಡಲಾಗಿದೆ ಎಂದು ಈಗಾಗಲೇ ಅನೇಕ ಒಂಟೆಗಳನ್ನು ಸ್ಫರ್ಧೆಯಿಂದ ಅನರ್ಹಗೊಳಿಸಲಾಗಿದೆ. ಟಾಪ್-5 ವಿಜೇತರಿಗೆ ಒಂದು ಮಿಲಿಯನ್ ರಿಯಾಲ್ (ಸುಮಾರು 2 ಕೋಟಿ ರೂ.) ನಗದನ್ನು ನೀಡಲಾಗುತ್ತದೆ.