ನಿಮ್ರೋಜ್(ಅಫ್ಘಾನಿಸ್ತಾನ): ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ಸೈನಿಕರು ಮತ್ತು ಇರಾನ್ ಸೈನಿಕರ ನಡುವೆ ಗಡಿಯಲ್ಲಿ ಘರ್ಷಣೆ ನಡೆದು, ಇಬ್ಬರು ಇರಾನ್ ಸೈನಿಕರು ಸಾವನ್ನಪ್ಪಿದ್ದಾರೆ. ಉಭಯ ದೇಶಗಳ ಸೈನಿಕರ ತಪ್ಪು ತಿಳುವಳಿಕೆಯಿಂದ ಈ ಘಟನೆ ನಡೆದಿದೆ ಎಂದು ಸೇನಾಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ಸಂಜೆ ನಿಮ್ರೋಜ್ನ ಕಾಂಗ್ ಜಿಲ್ಲೆಯಲ್ಲಿ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಕಾಂಗ್ ಜಿಲ್ಲೆಯಲ್ಲಿರುವ ಕಮಲ್ಖಾನ್ ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಆಫ್ಘನ್ ರೈತರಿಗೆ ಇರಾನ್ ಅಡ್ಡಿಪಡಿಸಿದ ಆರೋಪವಿದ್ದು, ಈ ವೇಳೆ ಸ್ಥಳಕ್ಕೆ ಆಫ್ಘನ್ ಪಡೆಗಳೂ ಆಗಮಿಸಿವೆ. ಈ ವೇಳೆ ಎರಡೂ ಪಡೆಗಳ ನಡುವೆ ಸಂಘರ್ಷ ನಡೆದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಇರಾನ್ ಪಡೆಗಳು ಕಾಂಗ್ ಜಿಲ್ಲೆಗೆ ಪ್ರವೇಶಿಸಿದ್ದೇ ಘರ್ಷಣೆಗೆ ಕಾರಣ. ಇಬ್ಬರು ಇರಾನ್ ಯೋಧರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದು, ಅಲ್ಲಿಯೇ ವಾಹನವನ್ನು ಬಿಟ್ಟು ತೆರೆಳಿದ್ದಾರೆ ಎಂದು ತಿಳಿದುಬಂದಿದೆ. ಈವರೆಗೂ ಅಧಿಕೃತ ಮೂಲಗಳು ಸಂಘರ್ಷಕ್ಕೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ವಿಶ್ಲೇಷಣೆ: ಉಕ್ರೇನ್ಗೆ ನೆರವಾದ ಅಮೆರಿಕ ನಿರ್ಮಿತ ಟ್ಯಾಂಕ್ ವಿರೋಧಿ ಕ್ಷಿಪಣಿಗಳು
ಗಡಿ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬೇಕು ಮತ್ತು ಎರಡು ಕಡೆಯವರು ಈ ಸಮಸ್ಯೆಯನ್ನು ಕೊನೆಗೊಳಿಸಬೇಕು ಎಂದು ಕಾಂಗ್ ಪ್ರದೇಶದ ನಿವಾಸಿ ರಹಮತುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಅಫ್ಘಾನ್ ಪಡೆಗಳು ಮತ್ತು ಇರಾನ್ ಪಡೆಗಳ ನಡುವೆ ಹಲವಾರು ಘರ್ಷಣೆಗಳು ಸಂಭವಿಸಿವೆ. ಆ ಘರ್ಷಣೆಗಳು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ವಾತಂಡೋಸ್ತ್ ಹೇಳಿದ್ದಾರೆ.
ಇರಾನ್ ಅಧಿಕಾರಿಗಳೂ ಘರ್ಷಣೆಯ ಕಾರಣದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಮೂರು ತಿಂಗಳ ಹಿಂದೆಯೂ ಇಸ್ಲಾಮಿಕ್ ಎಮಿರೇಟ್ ಅಫ್ಘಾನಿಸ್ತಾನ ಮತ್ತು ಇರಾನ್ ಪಡೆಗಳ ನಡುವೆ ಘರ್ಷಣೆ ನಡೆದಿತ್ತು.