ಕೀವ್: ರಷ್ಯಾ ದಾಳಿಯಿಂದ ಅಕ್ಷರಶಃ ನಲುಗಿ ಹೋಗಿರುವ ಉಕ್ರೇನ್ ಬ್ರಿಟನ್‌ನಿಂದ ಮತ್ತಷ್ಟು ನೆರವು ಕೋರಿದೆ. ಸಂಸತ್ತಿನ ಸದಸ್ಯರನ್ನು (ಹೌಸ್ ಆಫ್ ಕಾಮನ್ಸ್) ಉದ್ದೇಶಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾವನಾತ್ಮಕ ಭಾಷಣ ಮಾಡಿದ್ದು, ಬ್ರಿಟಿಷ್ ವಾರ್ ಲೀಡರ್ ಸರ್ ವಿನ್‌ಸ್ಟನ್ ಚರ್ಚಿಲ್ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಆಕಾಶ, ಸಮುದ್ರ ಹಾಗೂ ನೆಲದ ಮೂಲಕ ಆಕ್ರಮಣ ಮಾಡುತ್ತಿರುವ ರಷ್ಯಾ ಪಡೆಗಳ ವಿರುದ್ಧ ಹೋರಾಟದ ಪ್ರತಿಜ್ಞೆ ಮಾಡಿದ್ದಾರೆ.
ಯುದ್ಧದ ಸಮಯದಲ್ಲಿ ಅಂದಿನ ಬ್ರಿಟನ್ ಪ್ರಧಾನಿ ಮಾಡಿದ್ದ ಸ್ಪೂರ್ತಿದಾಯಕ ಹೇಳಿಕೆ ಪ್ರಸ್ತಾಪಿಸಿದ ಝೆಲನ್‌ಸ್ಕಿ, ನಾವು ಕೊನೆಯವರೆಗೂ ಸಮುದ್ರ, ಆಕಾಶದಲ್ಲಿ ಹೋರಾಡುತ್ತೇವೆ. ನಮ್ಮ ಭೂಮಿಗಾಗಿ ಎಷ್ಟೇ ಬೆಲೆ ತೆತ್ತಾದರೂ ಹೋರಾಟ ಮುಂದುವರಿಸುತ್ತೇವೆ. ಕಾಡಿನಲ್ಲಿ, ಹೊಲಗಳಲ್ಲಿ, ತೀರಗಳಲ್ಲಿ, ಬೀದಿಗಳಲ್ಲಿ ಹೋರಾಡುತ್ತೇವೆ ಎಂದಿದ್ದಾರೆ.
ಇರಬೇಕೆ ಅಥವಾ ಇರಬಾರದು ಎಂಬುದು ಈಗ ನಮಗೆ ಪ್ರಶ್ನೆಯಾಗಿದೆ. ಈ 13 ದಿನಗಳಲ್ಲಿ ಈ ಪ್ರಶ್ನೆಯನ್ನು ಕೇಳ ಬಹುದಿತ್ತು. ಆದರೆ ಈಗ ನಾನು ನಿಮಗೆ ಖಚಿತವಾದ ಉತ್ತರವನ್ನು ನೀಡಬಲ್ಲೆ. ಹೌದು ಖಂಡಿತವಾಗಿಯೂ ನಾವು ಇರಬೇಕು ಎಂದಿದ್ದಾರೆ.
ಕೀವ್‌ನಲ್ಲಿ ತಮ್ಮನ್ನು ಹತ್ಯೆ ಮಾಡುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ತಾನಿರುವ ಸ್ಥಳವನ್ನು ರಹಸ್ಯವಾಗಿಡಬೇಕು ಎಂದು ಷೇಕ್ಸ್‌ಪಿಯರ್ ಮತ್ತು ಚರ್ಚಿಲ್ ಅವರ ಉಲ್ಲೇಖಗಳ ಮೂಲಕ ಸಂಸದರಲ್ಲಿ ಝೆಲೆನ್‌ಸ್ಕಿ ಮನವಿ ಮಾಡಿದರು.
ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುವ ಭಾಗವಾಗಿ ವರ್ಷದ ಅಂತ್ಯದ ವೇಳೆಗೆ ರಷ್ಯಾದ ತೈಲ ಮತ್ತು ತೈಲ ಉತ್ಪನ್ನಗಳ ಆಮದನ್ನು ಬ್ರಿಟನ್ ಹಂತಹಂತವಾಗಿ ತೆಗೆದುಹಾಕುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿ ಕ್ವಾಸಿ ಕ್ವಾರ್ಟೆಂಗ್ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಝೆಲೆನ್‌ಸ್ಕಿ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: 'ಪುಟಿನ್ ಅವರನ್ನ ನಿಲ್ಲಿಸದಿದ್ದರೆ ನಮಗೆ ಯಾವುದೇ ಸ್ಥಳ ಸುರಕ್ಷಿತವಲ್ಲ'.. ಭಾವನಾತ್ಮಕ ಪತ್ರ ಬರೆದ ಉಕ್ರೇನ್ ಅಧ್ಯಕ್ಷರ ಪತ್ನಿ!